

ಗುಂಡ್ಲುಪೇಟೆ: ತಾಲೂಕಿನ ಹೊನ್ನೇಗೌಡನಹಳ್ಳಿ ಬಾಳೆ ತೋಟದಲ್ಲಿ ಯುವಕನ ಮೇಲೆ ದಾಳಿ ನಡೆಸಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ಶನಿವಾರ ಭೀಮನಬೀಡು ಸುತ್ತಮುತ್ತ ಕೂಂಬಿಂಗ್ ಕಾರ್ಯಾಚರಣೆ ನಡೆಸಿತು.
ಹೊನ್ನೇಗೌಡನಹಳ್ಳಿ ಗ್ರಾಮದ ವೃಷಭೇಂದ್ರಪ್ಪ ಅವರ ಬಾಳೆಯ ತೋಟದಲ್ಲಿ ಶುಕ್ರವಾರ ಕಾಣಿಸಿಕೊಂಡ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡರೂ ಜನರ ಗದ್ದಲದಿಂದ ಬೆದರಿ ಭೀಮನಬೀಡು ಗ್ರಾಮದತ್ತ ಓಡಿಹೋಗಿತ್ತು. ಈ ವೇಳೆ ಜಮೀನಿನಲ್ಲಿದ್ದ ಯುವಕನ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಸಂಜೆ ಕತ್ತಲಾಗಿದ್ದರಿಂದ ಕಾರ್ಯಾಚರಣೆ ಕೈಬಿಟ್ಟ ಅರಣ್ಯ ಇಲಾಖೆ ಶನಿವಾರ ಬೆಳಗ್ಗಿನಿಂದಲೇ ಪತ್ತೆಕಾರ್ಯ ಆರಂಭಿಸಿತು.
ಹೊನ್ನೇಗೌಡನಹಳ್ಳಿ, ಭೀಮನಬೀಡು ಸುತ್ತ ಸುಮಾರು 25ಕ್ಕೂ ಹೆಚ್ಚು ಎಸ್‌ಟಿಪಿಎಫ್ ಸಿಬ್ಬಂದಿ ಕೂಂಬಿಂಗ್ ನಡೆಸಿದರು. ಹುಲಿಯ ಪತ್ತೆಗೆ ಡ್ರೋಣ್ ಕ್ಯಾಮರಾ ಬಳಕೆ ಮಾಡಲಾಗಿತ್ತು. ಸುತ್ತಲ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿಲ್ಲ. ಇದರಿಂದ ಕಾಡಿನತ್ತ ತೆರಳಿರಬಹುದು ಎಂದು ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ರವೀಂದ್ರ ‘ವಿಜಯವಾಣಿ’ಗೆ ತಿಳಿಸಿದರು.
ಗಾಯಾಳು ಚೇತರಿಕೆ: ಶುಕ್ರವಾರ ಹುಲಿ ದಾಳಿಯಿಂದ ಗಾಯಗೊಂಡಿದ್ದ ಮನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಮಾಹಿತಿ ನೀಡಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.