

| ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ
ಬಂಡೀಪುರದಲ್ಲಿ ಹುಲಿ ಸಂತತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಸಫಾರಿ ಮಾರ್ಗದಲ್ಲೂ ವ್ಯಾಘ್ರಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ಪ್ರವಾಸಿಗರಿಗೆ ಮುದ ನೀಡುತ್ತಿವೆ. ಸಫಾರಿ ರಸ್ತೆಯ ಪ್ರಾರಂಭದ ಅನತಿ ದೂರದಲ್ಲಿ ಒಂದು ವಯಸ್ಕ ಹುಲಿ ಸೇರಿ ಮೂರು ಗಂಡು ಹುಲಿಗಳು ದರ್ಶನ ನೀಡುತ್ತಿದ್ದರೆ, ‘ಸುಂದರಿ’ ಎಂಬ ಹೆಣ್ಣು ಹುಲಿ ಎರಡು ಗಂಡು ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತಿರುವುದು ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ.
‘ಬಂಡೀಪುರದ ರಾಯಭಾರಿ’ ಎಂದು ಕರೆಸಿಕೊಳ್ಳುತ್ತಿದ್ದ ‘ಪ್ರಿನ್ಸ್’ ಹುಲಿಯ ಸಾವಿನ ನಂತರ ಸಫಾರಿಗೆ ತೆರಳುತ್ತಿದ್ದ ಪ್ರವಾಸಿಗರಿಗೆ ಹುಲಿಗಳ ದರ್ಶನ ವಿರಳವಾಗಿತ್ತು. ಕೆಕ್ಕನಹಳ್ಳ ಸಮೀಪ ಆಗಾಗ ಕಾಣಿಸಿಕೊಳ್ಳುತ್ತಿದ್ದ ‘ಮಾಯಾರ್ ರಾಣಿ’ ಎಂಬ ಹುಲಿ ಇತ್ತೀಚೆಗೆ ಕಾಣಿಸದೆ ಪ್ರವಾಸಿಗರು ತೀವ್ರ ನಿರಾಶೆಗೊಳಗಾಗುತ್ತಿದ್ದರು. ಆದರೆ ಈಗ ‘ಸುಂದರಿ’ ಎಂಬ ಹುಲಿ ಮೂರು ವರ್ಷದ ಎರಡು ಗಂಡು ಮರಿಗಳೊಂದಿಗೆ ಸಂಚರಿಸುತ್ತಿದೆ. ಸಾಮಾನ್ಯವಾಗಿ ಬೇಟೆಯಾಡಲು ಕಲಿತ ಮರಿಗಳನ್ನು ತಾಯಿ ಹುಲಿ ಹೊರಕ್ಕೆ ಕಳುಹಿಸುತ್ತದೆ. ಆದರೆ ಇಲ್ಲಿ ಮೂರು ವರ್ಷದ ಎರಡು ಗಂಡು ಮರಿಗಳನ್ನು ತನ್ನೊಂದಿಗೆ ಇಟ್ಟುಕೊಂಡಿರುವುದು ವಿಶೇಷವಾಗಿದೆ. ಈ ಮರಿಗಳನ್ನು ಪ್ರವಾಸಿಗರು ಅಕ್ಕರೆಯಿಂದ ‘ಬಂಡೀಪುರ ಬ್ರದರ್ಸ್’ ಎಂದು ಕರೆಯುತ್ತಿದ್ದಾರೆ. ಒಂದೇ ಕಡೆ ಎರಡು ಹುಲಿಗಳು ಕಾಣಿಸಿಕೊಳ್ಳುವುದು ಅಪರೂಪವಾಗಿದ್ದರೂ ಇಲ್ಲಿ ಮಾತ್ರ ಎರಡು ಗಂಡು ಹುಲಿಗಳು ಜತೆ ಜತೆಯಾಗಿ ಸಂಚರಿಸುತ್ತಿವೆ. ಸಫಾರಿ ರಸ್ತೆಯ ಸುತ್ತಮುತ್ತ ಸಂಚರಿಸುವ ‘ಮೂಗ’ ಎಂಬ ಗಂಡುಹುಲಿ ಬಸವನಕಟ್ಟೆ ಕೆರೆಯಲ್ಲಿ ಕಾಟಿಯನ್ನು ಬೇಟೆಯಾಡಿ ಮಾಂಸ ತಿನ್ನುತ್ತಿರುವ ದೃಶ್ಯ ಪ್ರವಾಸಿಗರ ಮೊಬೈಲ್ಗಳಲ್ಲಿ ಸೆರೆಯಾಗಿದೆ.
ಒಟ್ಟು ಹುಲಿಗಳ ಸಂಖ್ಯೆ 185: 2018ರ ಗಣತಿಯಲ್ಲಿ ಬಂಡೀಪುರದಲ್ಲಿ 128 ಇದ್ದ ಹುಲಿಗಳ ಸಂಖ್ಯೆ 2019ರಲ್ಲಿ 148ಕ್ಕೆ ಏರಿತ್ತು. ಮಧುಮಲೈ, ವೈನಾಡು ಹಾಗೂ ನಾಗರಹೊಳೆ ಕಡೆಯಿಂದ ಆಗಾಗ ಇತ್ತ ಬರುವ 37 ಹೆಚ್ಚು ವರಿ ಹುಲಿಗಳನ್ನು ಗುರುತಿಸಲಾಗಿದ್ದು, ಒಟ್ಟು 185 ಹುಲಿಗಳು ಈ ಅರಣ್ಯದಲ್ಲಿವೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಬಂಡೀಪುರ ಅರಣ್ಯದಲ್ಲಿ ವ್ಯಾಪಕವಾಗಿದ್ದ ಲಾಂಟಾನ ತೆರವುಗೊಳಿಸಿ ಹುಲ್ಲುಗಾವಲು ಬೆಳೆಸಿದ ಪರಿಣಾಮ ಹುಲ್ಲು ಮೇಯಲು ಬರುವ ಹೆಚ್ಚಿನ ಜಿಂಕೆ, ಕಾಟಿಗಳನ್ನು ಸುಲಭವಾಗಿ ಬೇಟೆಯಾಡುವ ಹುಲಿಗಳು ಸಫಾರಿಗೆ ಬರುವವರಿಗೆ ಕಾಣಿಸಿಕೊಳ್ಳುತ್ತಿವೆ.
| ಎಸ್.ಆರ್.ನಟೇಶ್ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ