

ಚನ್ನಪಟ್ಟಣ
ಕ್ಷೇತ್ರದಲ್ಲಿ ಮೈತ್ರಿ ಪಕ್ಷದಿಂದ ಯಾರು ಕಣಕ್ಕೆ ಇಳಿಯಬೇಕು ಎಂಬುದನ್ನು ದೆಹಲಿಯ ಬಿಜೆಪಿ ನಾಯಕರು ಮತ್ತು ನಾವು ಕೂತು ಮಾತನಾಡುತ್ತೇವೆ. ಎನ್ಡಿಎ ಅಭ್ಯರ್ಥಿ ಯಾರು ಆಗಬೇಕು ಎಂಬುದು ಆ ಸಭೆಯಲ್ಲಿ ತೀರ್ಮಾನವಾಗುತ್ತದೆ ಎಂದು ಕೇಂದ್ರ ಸಚಿವ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕ್ಷೇತ್ರದಲ್ಲಿ ನಮ್ಮ ಪಕ್ಷದಿಂದ ಪ್ರಾಥಮಿಕ ಹಂತವಾಗಿ ಕಾರ್ಯಕರ್ತರ ಸಭೆಗಳನ್ನು ಮಾಡುತ್ತಿದ್ದೇವೆ. ಬಹುಶಃ ಇನ್ನೊಂದು ವಾರದಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗುತ್ತದೆ. ಆ ಹಿನ್ನೆಲೆ ಕಾರ್ಯಕರ್ತರು, ಮತದಾರರ ನಾಡಿಮಿಡಿತ ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿ ನಮ್ಮ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಕ್ರೂಡಿಕರಿಸುತ್ತಿದ್ದೇವೆ ಎಂದರು.
ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಅದರ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ನಾವು ಕಳೆದ ಎರಡು ಚುನಾವಣೆಯನ್ನು ನಿರಂತರವಾಗಿ ಈ ಕ್ಷೇತ್ರದಲ್ಲಿ ಗೆದ್ದಿದ್ದೀವಿ. ಈ ಕ್ಷೇತ್ರದ ಕಾರ್ಯಕರ್ತರ ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಾನು ಯಾವುದೇ ನಿರ್ಣಯ ಮಾಡಲ್ಲ. 2018 ಹಾಗೂ 2023ರಲ್ಲಿ ನಿರಂತರವಾಗಿ ಗೆದ್ದಿದ್ದೇವೆ. ಮೊದಲಿನಿಂದಲೂ ಇದು ಜನತಾದಳದ ಭದ್ರಕೋಟೆ. ನಮ್ಮಲ್ಲಿನ ಕೆಲವೊಂದಷ್ಟು ತಿಕ್ಕಾಟಕ್ಕೆ ಸ್ವಲ್ಪ ವೀಕ್ ಆಗಿದೆ.
ಈಗ ಕಾರ್ಯಕರ್ತರು ಬಲಾಡ್ಯವಾಗಿ ಸಂಘಟನೆ ಮಾಡುತ್ತಿದ್ದಾರೆ. ಅದರಿಂದ ಅವರ ವಿಶ್ವಾಸ ಇಲ್ಲದೇ ಏನು ತೀರ್ಮಾನ ಮಾಡಲ್ಲ. ಅವರ ಪಕ್ಷದಲ್ಲಿ ಅವರು ಏನೇ ಚರ್ಚೆ ಮಾಡಿಕೊಂಡರೂ ಅದು ಅವರ ಸಂಘಟನೆ ವಿಚಾರ. ಅದನ್ನು ತಪ್ಪು ಅಂತ ನಾವು ಹೇಳಲ್ಲ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಉಪಚುನಾವಣೆ ಸಂಬಂಧ ಯಾವುದೇ ರೀತಿಯ ಒಪ್ಪಂದ ಆಗಿರಲಿಲ್ಲ. ಈ ಹಿಂದೆ ಲೋಕಸಭಾ ಚುನಾವಣೆಗೆ ನಾನು ಮೊದಲು ಸೂಚಿಸಿದ್ದೇ ಯೋಗೇಶ್ವರ್ ಹೆಸರು. ಗ್ರಾಮಾಂತರದಿಂದ ಅವರನ್ನೇ ಸ್ಪರ್ಧೆ ಮಾಡುವಂತೆ ಹೇಳಿದ್ದೆ. ಆದರೆ, ದೆಹಲಿಯಲ್ಲಿ ಗೃಹ ಮಂತ್ರಿಗಳು ಡಾ. ಮಂಜುನಾಥ್ ಅವರನ್ನು ಒಪ್ಪಿಸುವಂತೆ ಹೇಳಿದ್ದರು. ಅಮಿತ್ ಶಾ ಅವರ ಮಾತಿಗೆ ನಾನು ತಲೆ ಬಾಗಿದೆ. ಆದರೆ, ಅದಕ್ಕೂ ಮೊದಲು ನಾನು ಪ್ರಾಥಮಿಕವಾಗಿ ಯೋಗೆಶ್ವರ್ ಗೆ ತಿಳಿಸಿದ್ದೆ. ಎರಡು ಪಕ್ಷಗಳು ಒಟ್ಟಾಗಿದ್ದರೆ ಗೆಲುವು ಸುಲಭ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ. ಆದರೆ, ಈ ಉಪಚುನಾವಣೆ ಬಗ್ಗೆ ಯಾವುದೇ ರೀತಿಯ ಚರ್ಚೆ ಅಥವಾ ಒಪ್ಪಂದ ಆಗಿರಲಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಮೈತ್ರಿಗೆ ಮೂಲ ನಾನೇ ಎಂಬ ಸಿಪಿವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸಿ.ಪಿ ಯೋಗೆಶ್ವರ್ ಯಾರ ಜೊತೆ ಮೈತ್ರಿಗೆ ಮೂಲ ನಾನೇ ಅಂತಾ ಹೇಳಿದ್ದಾರೋ ಅದು ನನಗೆ ಗೊತ್ತಿಲ್ಲ. ಆದರೆ,
ಸಿಪಿ ಯೋಗೆಶ್ವರ್ ಉಪಚುನಾವಣೆ ಸಂಬಂಧ ಒಂದು ಸಾರಿ ನನ್ನನ್ನು ಭೇಟಿ ಮಾಡಿದ್ದರು. ಕ್ಷೇತ್ರಕ್ಕೆ ಹೋಗಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂಥ ನಾನೇ ಹೇಳಿದ್ದೆ. ನೀವು ನಿಲ್ಲಬೇಕು ಅಂತಿದ್ದರೆ ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂಥ ನಾನೇ ತಿಳಿಸಿದ್ದೆ. ಅವರು ಯಾವ ರೀತಿ ನಡೆದುಕೊಂಡಿದ್ದಾರೆ ನನಗೆ ಗೊತ್ತಿಲ್ಲ. ಮತ್ತೆ ಅವರು ನನ್ನ ಹತ್ತಿರ ಮಾತನಾಡಿಲ್ಲ ಎಂದರು.
ಇನ್ನೂ ಕ್ಷೇತ್ರದಲ್ಲಿ ನಿಖಿಲ್ ಸ್ಪರ್ಧೆಯ ಬಗ್ಗೆ ಮಾತನಾಡಿದ ಅವರು, ನಿಖಿಲ್ ಅವರ ಸ್ಪರ್ಧೆ ಬಗ್ಗೆ ಈವರೆಗೂ ನಾನು ತೀರ್ಮಾನ ಮಾಡಿಲ್ಲ. ಎನ್ ಡಿಎ ಅಭ್ಯರ್ಥಿ ಗೆಲ್ಲಬೇಕು ಅನ್ನೋದು ಅಷ್ಟೇ ನನ್ನ ಆಲೋಚನೆ. ಆ ಹಿನ್ನಲೆಯಲ್ಲಿ ಸೂಕ್ತವಾದ ಅಭ್ಯರ್ಥಿ ಯಾರು ಅನ್ನೋದನ್ನ ಬಿಜೆಪಿ, ಜೆಡಿಎಸ್ ನ ನಾಯಕರು, ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು