

ಬೈಂದೂರು: ತಾಲೂಕಿನ ವಿವಿಧೆಡೆ ಗುರುವಾರ ಸಂಜೆ ಸುರಿದ ಸಿಡಿಲು ಸಹಿತ ಭಾರಿ ಗಾಳಿ ಮಳೆಗೆ 16ಕ್ಕೂ ಅಧಿಕ ಕಡೆ ಆಸ್ತಿಪಾಸ್ತಿ ನಷ್ಟವಾಗಿದೆ.
ಬೈಂದೂರು ಭಾಗದಲ್ಲಿ 7 ಮೀ.ಮೀಗೂ ಹೆಚ್ಚಿನ ಮಳೆ ಸಂಜೆ ವೇಳೆಗೆ ಸುರಿದಿದೆ. ಭಾರಿ ಮಳೆಗೆ ಕಳವಾಡಿ ಶ್ರೀ ಮಾರಿಕಾಂಬಾ ದೇಗುಲದ ಎದುರು ಹೊಸತಾಗಿ ನಿರ್ಮಿಸಿದ್ದ 15 ಲಕ್ಷ ರೂ.ಗೂ ಹೆಚ್ಚಿನ ಮೌಲ್ಯದ ಊಟದ ಹಾಲ್‌ನ ಮೇಲ್ಛಾವಣಿ ಕುಸಿದು ಬಿದ್ದಿದೆ.
ಬೈಂದೂರು ಪೊಲೀಸ್ ಠಾಣೆ ಆವರಣದಲ್ಲಿ ಹಳೇ ವೃತ್ತನಿರೀಕ್ಷಕರ ಕಚೇರಿ ಮೇಲೆ ಮರ ಉರುಳಿ ಬಿದ್ದಿದೆ. ಬೈಂದೂರು ರಥಬೀದಿಯ ನವೀನ್ ವೈನ್ಸ್ ಹಿಂಭಾಗದ ಮನೆಯ ಶೌಚಗೃಹದ ಮೇಲ್ಛಾವಣಿ ಹಾರಿ ಹೋಗಿದ್ದು, ಮನೆ ಮಾಡು ಕುಸಿದಿದೆ. ಮರ ಹಾಗೂ ವಿದ್ಯುತ್ ಕಂಬ ಉರುಳಿ ಬಿದ್ದು ಬಹುತೇಕ ಬೈಂದೂರು ಕತ್ತಲಾವರಿಸಿತ್ತು.
ದೊಂಬೆ ಪರಿಸರದಲ್ಲಿ 12 ವಿದ್ಯುತ್ ಕಂಬ 20ಕ್ಕೂ ಅಧಿಕ ತೆಂಗಿನಮರ ಉರುಳಿದೆ. ಸಂಜೆ ವೇಳೆ ಗಾಳಿ, ಮಳೆ ಅಬ್ಬರ ಕಡಿಮೆಯಾಗಿದೆ. ಮೆಸ್ಕಾಂ, ಕಂದಾಯ ಇಲಾಖೆ ದುರಸ್ತಿ ಕಾರ್ಯದಲ್ಲಿ ತೊಡಗಿದೆ.