More

    ಟ್ಯಾಂಕ್ ಶಿಥಿಲಗೊಂಡಿದೆ ಎಚ್ಚರ ! ಕುಸಿದರೆ ಭಾರಿ ಅನಾಹುತ ಸಾಧ್ಯತೆ ತೆರವಿಗೆ ಗ್ರಾಮಸ್ಥರ ಒತ್ತಾಯ

    ಹರಿಪ್ರಸಾದ್ ನಂದಳಿಕೆ ಕಾರ್ಕಳ

    ಹಲವು ವರ್ಷಗಳ ಹಿಂದೆ ಗ್ರಾಮದ ಜನತೆಯ ಕುಡಿಯುವ ನೀರಿನ ಸರಬರಾಜಿಗಾಗಿ ಮರ್ಣೆ ಗ್ರಾಪಂ ಕಟ್ಟಡದ ಅನತಿ ದೂರದಲ್ಲಿ ನಿರ್ಮಿಸಲಾದ ನೀರಿನ ಟ್ಯಾಂಕ್ ಶಿಥಿಲ ವ್ಯವಸ್ಥೆಗೆ ತಲುಪಿದ್ದು, ಈಗಾಲೋ, ಆಗಲೋ ಬೀಳುವಂತಿದ್ದು ಟ್ಯಾಂಕ್ ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಕಾರ್ಕಳ ತಾಲೂಕಿನ ಮರ್ಣೆ ಗ್ರಾಪಂ ಕಟ್ಟಡದ ಸಮೀಪದಲ್ಲೇ 30 ವರ್ಷಗಳ ಹಿಂದೆ 50 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲಾಗಿದ್ದು, ಇದೀಗ ಕುಸಿಯುವ ಮಟ್ಟ ತಲುಪಿದೆ. ಟ್ಯಾಂಕ್ ತೆರವುಗೊಳಿಸುವಂತೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿಕೊಂಡರೂ ತೆರವು ಕಾರ್ಯಕ್ಕೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ.

    ಮರ್ಣೆ ಗ್ರಾಪಂ ವ್ಯಾಪ್ತಿಯ ನೂರಾರು ಮನೆಗಳಿಗೆ ನೀರು ಸರಬರಾಜು ಮಾಡುತ್ತಿದ್ದ ಹಳೇ ನೀರಿನ ಟ್ಯಾಂಕ್ ಇದೀಗ ಸಂಪೂರ್ಣ ಶಿಥಿಲಗೊಂಡಿದ್ದು, ಈ ಟ್ಯಾಂಕ್‌ನ ಸಿಮೆಂಟ್ ಸ್ಲಾೃಬ್‌ಗಳು ಎಲ್ಲವೂ ಎದ್ದು ಕಬ್ಬಿಣದ ಸಲಕೆಗಳು ಗೋಚರಿಸುತ್ತಿವೆ. ಈ ಅಪಾಯಕಾರಿ ನೀರಿನ ಟ್ಯಾಂಕ್‌ಗೆ ನೀರನ್ನು ತುಂಬಿಸಿ ಮರ್ಣೆ ಗ್ರಾಮದ 750ಕ್ಕೂ ಹೆಚ್ಚು ಕುಟುಂಬಗಳಿಗೆ ನೀರು ಸರಬರಾಜು ಕಾರ್ಯ ಈಗಲೂ ನಡೆಯುತ್ತಿದೆ. ಈ ಟ್ಯಾಂಕ್‌ನ ಸಾಮರ್ಥ್ಯದ ಬಗ್ಗೆ ನಿಟ್ಟೆ ಎನ್‌ಎಸ್‌ಎಂ ಇಂಜಿನಿಯರಿಂಗ್ ಕಾಲೇಜಿನ ತಜ್ಞರ ತಂಡ ಅಧ್ಯಯನ ನಡೆಸಿ, ಶಿಥಿಲಗೊಂಡ ಟ್ಯಾಂಕನ್ನು ತೆರವು ಗೊಳಿಸಬೇಕೆಂದು ಪಂಚಾಯಿತಿಗೆ ವರದಿ ಸಲ್ಲಿಕೆ ಮಾಡಿದೆ.

    ಪ್ರಾಣಭಯದಲ್ಲೇ ಸಂಚಾರ

    ಒಂದು ವೇಳೆ ಈ ಹಳೇ ನೀರಿನ ಟ್ಯಾಂಕ್ ಕುಸಿದರೆ ಸುಮಾರು 10 ಅಡಿ ಅಂತರದಲ್ಲಿರುವ ಗ್ರಾಪಂ ಕಟ್ಟಡಕ್ಕೆ ಅಪಾಯಕಾರಿಯಾಗಲಿದೆ ಹಾಗೂ ನಿತ್ಯ ನೂರಾರು ಸಾರ್ವಜನಿಕರು ಪಂಚಾಯಿತಿ ಕಾರ್ಯಾಲಯಕ್ಕೆ ಇದೇ ಪರಿಸರದಲ್ಲಿ ಓಡಾಡುತ್ತಾರೆ. ಅಲ್ಲದೆ ಸಮೀಪದಲ್ಲೇ ಗ್ರಾಮಕಾರಣಿಕರ ಕಚೇರಿ, ವಾಣಿಜ್ಯ ಸಂಕೀರ್ಣವಿದ್ದು ಇಲ್ಲಿನ ಅಂಗಡಿ ಮುಂಗ್ಗಟ್ಟುಗಳಿಗೆ ಜನ ಅತ್ತಿತ್ತ ಸಾಗುತ್ತಿರುತ್ತಾರೆ ಹಾಗೂ ರೈತ ಸಂಪರ್ಕ ಕೇಂದ್ರ, ಗ್ರಾಮಾಭಿವೃದ್ಧಿ ಕಚೇರಿ, ಗ್ರಾಮವನ್ ಕೇಂದ್ರ ಸೇರಿದಂತೆ ಜನರು ತಮ್ಮ ದೈನಂದಿನ ಬೇಡಿಕೆಗಳಿಗೆ ಪ್ರಾಣಭಯದಲ್ಲೇ ಭೇಟಿ ನೀಡುವಂತಾಗಿದೆ.

    ಗ್ರಾಮಸಭೆಯಲ್ಲಿ ಗದ್ದಲ

    ಆರು ತಿಂಗಳಿಗೊಮ್ಮೆ ನಡೆಯುವ ಗ್ರಾಮ ಸಭೆಯಲ್ಲಿ ಹಲವು ಬಾರಿ ಈ ಟ್ಯಾಂಕ್ ತೆರವುಗೊಳಿಸುವ ಬಗ್ಗೆ ನಿರ್ಣಯ ಕೈಗೊಂಡರು ಇಲ್ಲಿವರೆಗೂ ಫಲಪ್ರದವಾಗಿಲ್ಲ. ಈ ಬಗ್ಗೆ ಗ್ರಾಮ ಸಭೆಯಲ್ಲಿ ಸಾರ್ವಜನಿಕವಾಗಿ ತೀವ್ರ ಗದ್ದಲ ಉಂಟಾಗಿತ್ತು. ಆದರೆ ಗ್ರಾಮ ಪಂಚಾಯತಿಯಿಂದ ತಾಲೂಕು ಪಂಚಾಯಿತಿಗೆ ಪತ್ರ ಬರೆದರು ತಾಲೂಕು ಪಂಚಾಯಿತಿ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದೆ ಎನ್ನುವ ಉತ್ತರಗಳು ಬರುತ್ತಿದೆ.

    ಸಾರ್ವಜನಿಕರು ನಿತ್ಯ ಪ್ರಾಣ ಭಯದಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡರೂ ಹಳೇ ಟ್ಯಾಂಕ್ ಇನ್ನೂ ತೆರವುಗೊಳಿಸದಿರುವುದು ಬೇಸರದ ಸಂಗತಿಯಾಗಿದೆ. ಒಂದು ವೇಳೆ ಧರೆಗೆ ಉರುಳಿದರೇ ಭಾರಿ ಅನಾಹುತ ನಡೆಯುವ ಸಾಧ್ಯತೆ ಹೆಚ್ಚಿವೆ.
    -ಸತೀಶ್ ಅಂಬೇಲ್ಕರ್, ಸಾಮಾಜಿಕ ಕಾರ್ಯಕರ್ತ


    ಹಳೇ ಟ್ಯಾಂಕ್ ಕೆಡವಲು ಈಗಾಗಲೇ ತಾಪಂಗೆ ಪತ್ರ ಬರೆಯಲಾಗಿದೆ. ಹಾಗೂ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ಹೊಸ ಟ್ಯಾಂಕ್ ನಿರ್ಮಾಣಕ್ಕಾಗಿ ಜಾಗ ಗುರುತಿಸಲಾಗಿದೆ.
    -ತಿಲಕ್‌ರಾಜ್, ಮರ್ಣೆ ಪಿಡಿಒ


    ಹಳೇ ಟ್ಯಾಂಕ್ ತೆರವುಗೊಳಿಸಲು ಯಾವುದೇ ಮನವಿ ನನ್ನ ಗಮನಕ್ಕೆ ಬಂದಿಲ್ಲ, ಆದರೆ ಮನವಿ ಬಂದರೆ ಪರಿಶೀಲಿಸಿ ಸೂಕ್ತ ಕ್ರಮ ಕ್ರಮಕೈಗೊಳ್ಳಲಾಗುವುದು.
    -ಗುರುಶಾಂತಪ್ಪ ಬೆಳ್ಳುಂಡುಗಿ, ಕಾರ್ಕಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts