More

    ಗಂಗೊಳ್ಳಿಯಲ್ಲಿ ನಿರಂತರ ವಿದ್ಯುತ್ ಕಡಿತ, ಮೆಸ್ಕಾಂ ವಿರುದ್ಧ ಗ್ರಾಹಕರ ಆಕ್ರೋಶ, ದುರಸ್ತಿಗೆ ಕ್ರಮಕೈಗೊಳ್ಳದ ಗುತ್ತಿಗೆದಾರರು

    ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

    ಮಳೆಗಾಲದಲ್ಲಿ ಗಾಳಿ ಮಳೆ ಜೋರಾದರೆ ವಿದ್ಯುತ್ ಕಡಿತವಾಗುವುದು ಸಹಜ. ಆದರೆ ಗಾಳಿ, ಮಳೆ ಇಲ್ಲದಿದ್ದರೂ ಸ್ವಲ್ಪ ಮಳೆ ಬಿದ್ದರೆ ಸಾಕು ಗಂಟೆಗಟ್ಟಲೆ ವಿದ್ಯುತ್ ಕಡಿತ! ಇದು ಗಂಗೊಳ್ಳಿ ಸುತ್ತಮುತ್ತಲಿನ ಪ್ರದೇಶದ ಗ್ರಾಹಕರಿಗೆ ಕಳೆದ ಅನೇಕ ದಿನಗಳಿಂದ ಮೆಸ್ಕಾಂ ನೀಡುತ್ತಿರುವ ವಿದ್ಯುತ್ ಕಡಿತದ ಭಾಗ್ಯ.

    ಅನೇಕ ದಿನಗಳಿಂದ ಗಂಗೊಳ್ಳಿಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ಅರ್ಧ ಗಂಟೆ ಕರೆಂಟ್ ಇದ್ದರೆ ಒಂದು ಗಂಟೆ ವಿದ್ಯುತ್ ಕಡಿತ. ಸ್ವಲ್ಪ ಮಳೆ ಬಿದ್ದರಂತೂ ಕೇಳುವುದೇ ಬೇಡ. ಎಷ್ಟು ಹೊತ್ತಿಗೆ ಕರೆಂಟ್ ಬರುತ್ತದೆ ಎಂದು ಹೇಳುವುದೇ ಕಷ್ಟ. ಗುಡ್ಡಗಾಡು ಪ್ರದೇಶದಲ್ಲಿನ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಲೈನ್ ಫಾಲ್ಟ್, ರಿಪೇರಿ ನೆಪದಲ್ಲಿ ಗಂಟೆಗಟ್ಟಲೆ ವಿದ್ಯುತ್ ಕಡಿತ ಮಾಡುತ್ತಿದ್ದರೆ, ಒಂದೇ ವಾರದಲ್ಲಿ ಎರಡು ದಿನ ಬೆಳಗ್ಗೆಯಿಂದ ಸಂಜೆ ತನಕ ವಿದ್ಯುತ್ ಕಡಿತ ಮಾಡಲಾಗಿದೆ. ಮಂಗಳವಾರ ಸಂಜೆ 6.30ಕ್ಕೆ ಹೋದ ಕರೆಂಟ್ ರಾತ್ರಿ 12.45ಕ್ಕೆ ಬಂದಿದೆ. ನಿರಂತರ ವಿದ್ಯುತ್ ಕಡಿತ ಹಾಗೂ ಸಕಾಲದಲ್ಲಿ ದೋಷ ಸರಿಪಡಿಸಲು ಮುಂದಾಗದಿರುವ ಮೆಸ್ಕಾಂ ಧೋರಣೆ ವಿರುದ್ಧ ಸ್ಥಳೀಯ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಿರ್ವಹಣೆ ಗುತ್ತಿಗೆದಾರರ ವೈಫಲ್ಯ

    ವಿದ್ಯುತ್ ಕಡಿತವಾದರೆ ಗಂಗೊಳ್ಳಿ ವಿದ್ಯುತ್ ಉಪಕೇಂದ್ರಕ್ಕೆ ಸರಬರಾಜು ಆಗುವ ಮಾರ್ಗದ ನಿರ್ವಹಣೆ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು ಸಕಾಲದಲ್ಲಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಮುಖ್ಯ ಮಾರ್ಗದಲ್ಲಿ ದೋಷ ಕಂಡು ಬರುತ್ತಿರುವುದರಿಂದ ಅದನ್ನು ದುರಸ್ತಿ ಮಾಡಬೇಕಾದ ಗುತ್ತಿಗೆದಾರರು ಸಕಾಲದಲ್ಲಿ ದುರಸ್ತಿಗೆ ಕ್ರಮಕೈಗೊಳ್ಳುತ್ತಿಲ್ಲ. ದೋಷ ಶೀಘ್ರ ಸರಿಪಡಿಸಿ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಮಾತು ಮೆಸ್ಕಾಂ ಅಧಿಕಾರಿಗಳಿಂದ ಕೇಳಿ ಬರುತ್ತಿದೆ.

    ಒಟ್ಟಿನಲ್ಲಿ ಗಂಗೊಳ್ಳಿ ಸುತ್ತಮುತ್ತ ಗಾಳಿ ಮಳೆ ಇಲ್ಲದೆಯೂ ವಿದ್ಯುತ್ ಕಣ್ಣುಮುಚ್ಚಾಲೆ ಆಟ ನಡೆಯುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದ್ದಲ್ಲಿ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ ಎಂದು ಗ್ರಾಹಕರು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts