More

    ಕೃಷಿ ಚಟುವಟಿಕೆಗೆ ಚಾಲನೆ, ನಿಗದಿತ ಸಮಯಕ್ಕೂ ಮೊದಲೇ ಮಳೆ ನಿರೀಕ್ಷೆ, ರೈತರ ಮೊಗದಲ್ಲಿ ಮಂದಹಾಸ

    ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

    ಈ ಬಾರಿ ನಿಗದಿತ ಸಮಯಕ್ಕೆ ಮುಂಗಾರು ಆರಂಭವಾಗುವ ನಿರೀಕ್ಷೆಯಿದ್ದು, ಮಾತ್ರವಲ್ಲದೆ ಉತ್ತಮ ಮುಂಗಾರು ಆಗುವ ಲಕ್ಷಣ ಗೋಚರಿಸಿವೆ. ಮುಂಗಾರು ಮಳೆಯನ್ನೇ ನಂಬಿಕೊಂಡು ಭತ್ತದ ಬೆಳೆ ಮಾಡುವ ರೈತರ ಮೊಗದಲ್ಲಿ ತುಸು ಮಂದಹಾಸ ತರಿಸಿದೆ.

    ಕೆಲದಿನಗಳಿಂದ ಅಲ್ಲಲ್ಲಿ ಒಂದಷ್ಟು ಮಳೆ ಸುರಿದಿದ್ದು, ಕೆಲವೆಡೆಗಳಲ್ಲಿ ರೈತರು ಗದ್ದೆಗೆ ಗೊಬ್ಬರ, ಸುಡು ಮಣ್ಣು ಹಾಕುವುದು, ಗದ್ದೆ ಹದ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಇನ್ನಷ್ಟು ಮಳೆ ಬಂದರೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಮತ್ತಷ್ಟು ಬಿರುಸುಗೊಳ್ಳಲಿದೆ.

    ಬಿತ್ತನೆ ಬೀಜ ಲಭ್ಯ

    ಹೋಬಳಿ ವ್ಯಾಪ್ತಿಗಳಲ್ಲಿರುವ ರೈತ ಸೇವಾ ಕೇಂದ್ರಗಳಲ್ಲಿ ಈಗಾಗಲೇ ಬಿತ್ತನೆ ಬೀಜ ಲಭ್ಯವಿದೆ. ಎಂ4 260 ಕ್ವಿಂಟಾಲ್ ತರಿಸಲಾಗಿದ್ದು, ಬಹುತೇಕ ಖಾಲಿಯಾಗಿದೆ. ಆದರೆ ಅದಕ್ಕೆ ಪರ್ಯಾಯವಾಗಿ ಸಹ್ಯಾದ್ರಿ ಕೆಂಪು ಚಂದ್ರಮುಖ್ತಿ ಬೀಜಗಳನ್ನು ವಿತರಿಸಲಾಗುತ್ತಿದ್ದು, ಉಮಾ ತಳಿಯ ಬೀಜ ದಾಸ್ತಾನಿದೆ.

    ಮುಂಗಾರುಪೂರ್ವ ಮಳೆ ಕೊರತೆ

    ಕುಂದಾಪುರ ಹಾಗೂ ವಂಡ್ಸೆ ಹೋಬಳಿಯನ್ನೊಳಗೊಂಡ ತಾಲೂಕಿನಲ್ಲಿ ಜನವರಿಯಿಂದ ಮೇವರೆಗೆ ಮುಂಗಾರುಪೂರ್ವ ಮಳೆ ಕೊರತೆಯಾಗಿದೆ. ಬೈಂದೂರು ತಾಲೂಕಿನಲ್ಲಿ 93 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೆಎಸ್‌ಎನ್‌ಡಿಎಂಸಿ ಮಾಹಿತಿ ಪ್ರಕಾರ ಮಳೆಯಾಗಿರುವುದು 61 ಮಿ.ಮೀ. ಮಾತ್ರ. ಕುಂದಾಪುರದಲ್ಲಿ 37 ಮಿ.ಮೀ. ಮಳೆಯಾಗಬೇಕಿದ್ದು, 25 ಮಿ.ಮೀ. ಮಳೆ ಸುರಿದಿದೆ. ಬೈಂದೂರಿನಲ್ಲಿ 32 ಮಿ.ಮೀ. ಮಳೆಯಾಗಬೇಕಿದ್ದು, ಮಳೆ ಬಂದಿರುವುದು 12 ಮಿ.ಮೀ. ಮಾತ್ರ.

    ಒಟ್ಟಿನಲ್ಲಿ ಮುಂಗಾರುಪೂರ್ವ ಮಳೆ ಕೊರತೆಯಾಗಿದ್ದರೂ ಕಳೆದ ಕೆಲ ದಿನಗಳಿಂದ ಅಲ್ಲಲ್ಲಿ ಒಂದಷ್ಟು ಮಳೆ ಸುರಿದಿರುವುದು ಮುಂಗಾರು ಮಳೆಯನ್ನೇ ನಂಬಿಕೊಂಡು ಭತ್ತದ ಬೆಳೆ ಮಾಡುವ ರೈತರ ಮೊಗದಲ್ಲಿ ತುಸು ಮಂದಹಾಸ ತರಿಸಿದೆ.

    13,200 ಹೆಕ್ಟೇರ್ ಗುರಿ

    ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಒಟ್ಟು 13,200 ಹೆಕ್ಟೇರ್ ಭತ್ತದ ಬೆಳೆ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಕುಂದಾಪುರ ಹೋಬಳಿಯಲ್ಲಿ 4,350 ಹೆಕ್ಟೇರ್, ಬೈಂದೂರು ಹೋಬಳಿಯಲ್ಲಿ 4,600 ಹೆಕ್ಟೇರ್ ಹಾಗೂ ವಂಡ್ಸೆ ಹೋಬಳಿಯಲ್ಲಿ 4,250 ಹೆಕ್ಟೇರ್ ಗುರಿಯಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಂದರೆ ಇದು ಸಾಕಾರಗೊಳ್ಳಲಿದೆ.

    ಈ ಬಾರಿ ಉತ್ತಮ ಮುಂಗಾರು ಹಂಗಾಮು ಆಗಬಹುದು ಎನ್ನುವ ನಿರೀಕ್ಷೆಯಿದೆ. ಬಿತ್ತನೆ ಬೀಜ ವಿತರಣೆ ಶುರುವಾಗಿದೆ. ಎಂ4ಗೆ ಪರ್ಯಾಯವಾಗಿ ಸಹ್ಯಾದ್ರಿ ಕೆಂಪು ಚಂದ್ರಮುಖ್ತಿ ವಿತರಿಸಲಾಗುತ್ತಿದೆ. ಮಂಗಳೂರು ಭಾಗದಲ್ಲಿ ಈಗಾಗಲೇ ಯಶಸ್ವಿಯಾಗಿದೆ. ಈ ಬಾರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರಿಂದ ಹಡಿಲು ಭೂಮಿ ನಾಟಿ ಕಾರ್ಯ ಹೆಚ್ಚಾಗಬಹುದು.
    -ರೂಪಾ ಮಾಡ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts