ರಾಷ್ಟ್ರೀಯ ಥ್ರೋಬಾಲ್ ತಂಡಕ್ಕೆ ಆಯ್ಕೆ : ಕಾಸರಗೋಡು ಜಿಲ್ಲೆಯ ಪ್ರತಿಭಾನ್ವಿತ ಆಟಗಾರರು

New Project (20)
Published on

ಬದಿಯಡ್ಕ: ಕಾಸರಗೋಡು ಜಿಲ್ಲೆಯ ಇಬ್ಬರು ಪ್ರತಿಭಾವಂತ ಕ್ರೀಡಾಳುಗಳು ಸೀನಿಯರ್ ವಿಭಾಗದ ಹುಡುಗರ ಥ್ರೋಬಾಲ್ ಚಾಂಪಿಯನ್ ಆಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಕಾಸರಗೋಡು ನಿವಾಸಿಗಳಾದ ಧನುಷ್ ಕೆ., ಬಸವರಾಜ್ ನೇಪಾಳದಲ್ಲಿ ಈ ತಿಂಗಳು 16ರಿಂದ 21ರವರೆಗೆ ನಡೆಯುವ ಅಂತಾರಾಷ್ಟ್ರೀಯಮಟ್ಟದ ಥ್ರೋಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ತಂಡವನ್ನು ಪ್ರತಿನಿಧಿಸುವರು. ಕಳೆದ ಹಲವಾರು ವರ್ಷಗಳಿಂದ ಸೀನಿಯರ್ ವಿಭಾಗದಲ್ಲಿ ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧಿಸಿದ ಧನುಷ್ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಕೇರಳ ತಂಡದ ಸದಸ್ಯರಾಗಿದ್ದರು. ಮೂಲತಃ ಅಗಲ್ಪಾಡಿ ಗ್ರಾಮ ನಿವಾಸಿಯಾದ ಧನುಷ್ ಪ್ರೌಢ ಶಿಕ್ಷಣವನ್ನು ಎಸ್.ಎ.ಪಿ.ಎಚ್.ಎಸ್ ಅಗಲ್ಪಾಡಿ, ಪ್ಲಸ್ ಟು ಶಿಕ್ಷಣವನ್ನು ಎಂ.ಎಸ್.ಸಿ.ಎಚ್.ಎಸ್. ನೀರ್ಚಾಲಿನಲ್ಲಿ ಪಡೆದಿರುತ್ತಾರೆ. ಕುಂಬ್ಡಾಜೆ ನಿವಾಸಿ ಶ್ರೀಧರ ಕೆ., ಹಾಗೂ ಇಂದಿರಾ ದಂಪತಿ ಪುತ್ರ.

ಮೂಲತಃ ಕರ್ನಾಟಕ ನಿವಾಸಿಯಾದ ಬಸವರಾಜ್ ಕಳೆದ ಹಲವಾರು ವರ್ಷಗಳಿಂದ ಜಿಲ್ಲಾ ಸೀನಿಯರ್ ಹುಡುಗರ ತಂಡದ ಸದಸ್ಯ, ಮೂರು ಬಾರಿ ನ್ಯಾಷನಲ್ ಪಂದ್ಯಾಟದಲ್ಲಿ ಕೇರಳ ತಂಡದ ಸದಸ್ಯರಾಗಿದ್ದರು. ಒಮ್ಮೆ ಕೇರಳ ತಂಡದ ನಾಯಕ, ಎರಡು ಬಾರಿ ಉಪನಾಯಕನಾಗಿದ್ದರು. ಬಸವರಾಜ್ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪ್ಲಸ್ ಟು ವರೆಗೆ ಮೀಯಪದವು ವಿದ್ಯಾವರ್ಧಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಕೊಪ್ಪಳ ನಿವಾಸಿ ಶರಣಪ್ಪ ಹಾಗೂ ಚಂದ್ರಮ್ಮ ದಂಪತಿಯ ಪುತ್ರ.ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಅವರನ್ನು ರಾಜ್ಯ ಥ್ರೋಬಾಲ್ ಉಪಾಧ್ಯಕ್ಷ ಶಶಿಕಾಂತ್ ಜಿ.ಆರ್., ಜಿಲ್ಲಾ ಅಸೋಸಿಯೇಷನ್ ಅಧ್ಯಕ್ಷ ಕೆ.ಸೂರ್ಯನಾರಾಯಣ ಭಟ್, ಕಾರ್ಯದರ್ಶಿ ಸಂತೋಷ್ ಪಿ.ಯಚ್. ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net