ರಕ್ತ ಚಂದನ ಕಳ್ಳಸಾಗಣೆ ಮಾಡುತ್ತಿದ್ದವರನ್ನು ಸೆರೆ ಹಿಡಿದಾಗ ಬಯಲಾಯಿತು ಮೂರು ವರ್ಷದ ಹಿಂದಿನ ಕೊಲೆ ರಹಸ್ಯ!

case
Published on

ಬೆಂಗಳೂರು: ರಕ್ತ ಚಂದನವನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದವರನ್ನು ಸೆರೆ ಹಿಡಿದಾಗ, ಮೂರು ವರ್ಷಗಳ ಹಿಂದಿನ ಕೊಲೆ ಪ್ರಕರಣವೊಂದರ ರಹಸ್ಯ ಬಯಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚಂದನ ಕಳ್ಳಸಾಗಣೆ ಪ್ರಕರಣದಡಿಯಲ್ಲಿ ಓರ್ವ ಮಹಿಳೆ ಸೇರಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಕೊಲೆ ಆರೋಪಿ ಸುಹೇಲ್​ ಖಾನ್​
ಕೊಲೆ ಆರೋಪಿ ಸುಹೇಲ್​ ಖಾನ್​

ಸುಹೇಲ್​ ಖಾನ್​, ಅಬ್ದುಲ್​ ಬಸೀರ್ ಮತ್ತು ಅನೀಸಾ ಫಾತಿಮಾ ಟಾಟಾ ಏಸ್​ ವಾಹನದಲ್ಲಿ ಬೆಂಗಳೂರಿನ ಆರ್​ಟಿ ನಗರದಿಂದ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಸುಮಾರು 502 ಕೆ.ಜಿ ರಕ್ತ ಚಂದನವನ್ನು ಗಾಡಿಯಲ್ಲಿ ತುಂಬಿಕೊಳ್ಳಲಾಗಿತ್ತು. ಆರೋಪಿಗಳನ್ನು ಸೆರೆ ಹಿಡಿದಿರುವ ಪೊಲೀಸರು ವಾಹನವನ್ನು ಮತ್ತು ರಕ್ತ ಚಂದನದ ಮರದ ತುಂಡುಗಳನ್ನು ಜಪ್ತಿ ಮಾಡಿದ್ದಾರೆ.

ಈ ಆರೋಪಿಗಳ ವಿಚಾರಣೆ ವೇಳೆ ಇನ್ನೊಂದು ಪ್ರಕರಣದ ರಹಸ್ಯವೂ ಬಿಚ್ಚಿಕೊಂಡಿದೆ. 2017ರಲ್ಲಿ ನೂರ್ ಎಂಬಾತನನ್ನ ಕಿಡ್ನಾಪ್ ಮಾಡಿ ಗೌರಿಬಿದನೂರಿನ ಫಾರ್ಮ್ ಹೌಸ್​ನಲ್ಲಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಆರ್​ಟಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳ ಪೈಕಿ ಸುಹೇಲ್ ಖಾನ್ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತನೊಂದಿಗೆ ಬೇರೆ ಮೂವರು ಆರೋಪಿಗಳು ಸೇರಿಕೊಂಡು ಕೊಲೆ ಮಾಡಿದ್ದಾಗಿ ಆತ ಬಾಯಿಬಿಟ್ಟಿದ್ದಾನೆ.

ಭಾನುವಾರ ರಾತ್ರಿ ಹೆಚ್ಎಂಟಿ ಲೇಔಟ್​ನಲ್ಲಿ ಅಕ್ರಮವಾಗಿ ಮರಗಳನ್ನ ಸಾಗಾಟ ಮಾಡಡುತ್ತಿರುವುದಾಗಿ ಕರೆ ಬಂದಿತ್ತು. ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಮಹಿಳಾ ಪಿಎಸ್ಐ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಟಾಟ ಏಸ್ ಟೇಂಪೋದಲ್ಲಿ 502 ಕೆಜಿ ರಕ್ತಚಂದನ ಮರದ ತುಂಡುಗಳು ಪತ್ತೆಯಾಗಿದೆ. ಅಕ್ರಮವಾಗಿ ಸಾಗಾಟ ಮಾಡಲು ಯತ್ನಸುತ್ತಿದ್ದ ಓರ್ವ ಮಹಿಳೆ ಸೇರಿ ಮೂವರನ್ನ ಬಂಧಿಸಲಾಗಿದೆ. ಇದರಲ್ಲಿ ಆರೋಪಿಯಾಗಿರುವ ಸುಹೇಲ್​ ಖಾನ್​ ಕೊಲೆ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದಾನೆ. ಆ ಪ್ರಕರಣದ ಉಳಿದ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಇದೀಗ ಅವರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net