ಸಂಕಷ್ಟದಲ್ಲಿ ಮೂರು ಸಾವಿರ ರೈತರು

7GTL 1D
Published on

ಪರಶುರಾಮ ಕೆರಿ ಹಾವೇರಿ

ಜಿಲ್ಲೆಯ ರೈತರು ನೆರೆ ಹಾಗೂ ಅತಿವೃಷ್ಟಿಯ ಹೊಡೆತಕ್ಕೆ ಸಿಲುಕಿ ನಲುಗಿದ್ದಾರೆ. ಈ ಸಮಯದಲ್ಲಿ ನೆರವಾಗಬೇಕಿದ್ದ ಬೆಳೆ ವಿಮೆ ಹಣವೂ ಸಕಾಲಕ್ಕೆ ಸಿಗದೇ ರೈತರು ಪರದಾಡುವಂತಾಗಿದೆ.

2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲೂಕಿನ 2,533 ರೈತರಿಗೆ ಹೋಬಳಿವಾರು ಫಸಲ್ ಬಿಮಾ ಯೋಜನೆಯಲ್ಲಿ 2.13 ಕೋಟಿ ರೂ., ಗ್ರಾಪಂವಾರು ಫಸಲ್ ಬಿಮಾ ಯೋಜನೆಯಲ್ಲಿ 7,621 ರೈತರಿಗೆ 13.21 ಕೋಟಿ ರೂಪಾಯಿಯ ವಿಮೆ ಪರಿಹಾರವು ಕಳೆದ ಜುಲೈನಲ್ಲಿಯೇ ಬಿಡುಗಡೆಗೊಂಡಿದೆ. ಆದರೆ, ತಾಂತ್ರಿಕ ಸಮಸ್ಯೆಯ ನೆಪದಲ್ಲಿ ತಾಲೂಕಿನಲ್ಲಿ ಅಂದಾಜು 3 ಸಾವಿರದಷ್ಟು ರೈತರಿಗೆ ಇನ್ನೂ ಹಣ ಪಾವತಿಯಾಗಿಲ್ಲ. ಈ ಕುರಿತು ರೈತರು ಕೃಷಿ ಇಲಾಖೆ, ಬ್ಯಾಂಕ್​ಗಳಿಗೆ ಅಲೆದಾಡಿ ಬೇಸತ್ತಿದ್ದಾರೆ.

ಏನು ತಾಂತ್ರಿಕ ಸಮಸ್ಯೆ?: ರೈತರು ಬೆಳೆ ವಿಮೆ ಕಂತು ತುಂಬುವ ಸಮಯದಲ್ಲಿ ನಮೂದಿಸಿದ್ದ ಬೆಳೆಯನ್ನೇ ಬೆಳೆದಿಲ್ಲವಂತೆ. ವಿಮೆ ತುಂಬಿದ ಬೆಳೆಯೇ ಬೇರೆ, ಬೆಳೆದಿರುವ ಬೆಳೆಯೇ ಬೇರೆಯಾಗಿದೆ. ಹೀಗಾಗಿ, ಆ ರೈತರಿಗೆ ವಿಮೆ ಹಣ ನೀಡುವುದಿಲ್ಲ ಎಂಬ ವಾದ ಇನ್ಶೂರೆನ್ಸ್ ಕಂಪನಿಯವರದ್ದಾಗಿದೆ. ಆದರೆ, ಇಲ್ಲಿ ನಿಜವಾಗಿ ತಪ್ಪಾಗಿದ್ದು, ರೈತರಿಂದಲೋ ಅಥವಾ ಬೆಳೆ ದೃಢೀಕರಣ ನೀಡಿರುವ ಕೃಷಿ ಇಲಾಖೆಯದ್ದೋ ಎಂಬ ಪ್ರಶ್ನೆ ಎದ್ದಿದೆ. ಜತೆಗೆ ರೈತರು ವಿಮೆ ತುಂಬಿದ ಬ್ಯಾಂಕ್​ನ ಬದಲು ಕೊನೆಯದಾಗಿ ಯಾವ ಬ್ಯಾಂಕ್​ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿದ್ದಾರೋ ಆ ಬ್ಯಾಂಕ್ ಖಾತೆಗೆ ವಿಮೆ ಹಣ ಜಮೆಯಾಗಿದೆ. ಮತ್ತೊಂದು ವಿಚಿತ್ರವೆಂದರೆ, ಮೊಬೈಲ್​ಫೋನ್ ಸಿಮ್ೆ ಸಂಬಂಧಿಸಿದ ಕಂಪನಿಯ ಬ್ಯಾಂಕ್​ನಲ್ಲಿ ಹಣ ಜಮಾವಣೆಯಾದ ಉದಾಹರಣೆಗಳು ಬೆಳಕಿಗೆ ಬಂದಿವೆ. ರೈತರೇ ಸ್ವತಃ ವಿಮಾ ಕಂಪನಿಗೆ ಹೋಗಿ ವಿಚಾರಿಸಿದಾಗ ಈ ವಿಷಯ ಬಯಲಾಗಿದೆ.

ಒಂದೇ ಗ್ರಾಮದಲ್ಲಿ ಕೆಲವರಿಗಷ್ಟೇ ಹಣ ಮಂಜೂರಾಗಿದೆ. ಇದರಿಂದ ಕಂಗಾಲಾದ ರೈತರು ಬ್ಯಾಂಕ್ ಹಾಗೂ ಕೃಷಿ ಇಲಾಖೆಯ ಕಚೇರಿಗೆ ಅಲೆದಾಡುತ್ತಿದ್ದಾರೆ. ಕೆಲವರು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಕಚೇರಿಗೂ ಹೋಗಿ ವಿಚಾರಿಸಿದಾಗ, ‘ವಿಮೆ ತುಂಬಿದ ಬೆಳೆಯೇ ಬೇರೆ, ಬೆಳೆ ಕಟಾವು ಸಮೀಕ್ಷೆಯಲ್ಲಿ ಜಮೀನಿನಲ್ಲಿದ್ದ ಬೆಳೆಯೇ ಬೇರೆಯಾಗಿದೆ. ಹೀಗಾಗಿ ವಿಮೆ ಬರುವುದಿಲ್ಲ’ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಕೃಷಿ ಇಲಾಖೆಯವರನ್ನು ಈ ಕುರಿತು ವಿಚಾರಿಸಿದರೆ, ‘ಈ ಸಮಸ್ಯೆಯನ್ನು ಶೀಘ್ರದಲ್ಲಿಯೇ ಪರಿಹರಿಸಲಾಗುವುದು. ನಿಮಗೂ ವಿಮೆ ಹಣ ಬರುತ್ತೆ’ ಎನ್ನುತ್ತಿದ್ದಾರೆ. ಆದರೆ, ಆರು ತಿಂಗಳಿನಿಂದ ಅಲೆದಾಟ ಮಾತ್ರ ತಪ್ಪಿಲ್ಲ ಎಂದು ರೈತರು ದೂರುತ್ತಿದ್ದಾರೆ.

ಬೆಳೆ ಸಮೀಕ್ಷೆಯನ್ನು ಅಧಿಕಾರಿಗಳಿಗಿಂತ ಹೆಚ್ಚಾಗಿ ಕೃಷಿ ಅನುವುಗಾರರು ನಡೆಸಿದ್ದಾರೆ. ಅವರು ವಾಸ್ತವವಾಗಿ ಎಲ್ಲ ಜಮೀನುಗಳಿಗೆ ಭೇಟಿ ನೀಡಿಲ್ಲ. ಅಲ್ಲದೆ, 2018ರ ಮುಂಗಾರು ಹಂಗಾಮಿನಲ್ಲಿ ಸಕಾಲದಲ್ಲಿ ಮಳೆ ಬಾರದ್ದರಿಂದ ಕೆಲ ರೈತರು ಮೊದಲು ಬಿತ್ತಿದ ಬೆಳೆಗಳನ್ನು ತೆರವುಗೊಳಿಸಿ ಬೇರೆ ಬೆಳೆ ಬೆಳೆದಿದ್ದಾರೆ. ವಿಮೆ ತುಂಬಿದ ಕಾರಣಕ್ಕೆ ಬಿತ್ತಿದ್ದನ್ನೇ ಕಾಯುತ್ತ ಕುಳಿತುಕೊಳ್ಳಲು ಸಾಧ್ಯವಿದೆಯೇ? ವಿಮೆ ಕಂಪನಿ ಹಾಗೂ ಕೃಷಿ ಇಲಾಖೆ ಕೂಡಲೆ ಈ ಸಮಸ್ಯೆ ಪರಿಹರಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಇದರತ್ತ ಗಮನ ಹರಿಸಬೇಕು.| ಸತೀಶ ಸಂದಿಮನಿ, ತಾಪಂ ಸದಸ್ಯಯಾವ ಯಾವ ರೈತರಿಗೆ ಬೆಳೆ ವಿಮೆ ಮಂಜೂರಾಗಿದೆ, ಯಾವ ರೈತರದ್ದು ಬೆಳೆ ಸಮೀಕ್ಷೆ ಮಿಸ್​ವ್ಯಾಚ್ ಆಗಿದೆ ಎಂಬ ಎಲ್ಲ ಮಾಹಿತಿಯನ್ನು ಬೆಂಗಳೂರು ಕಚೇರಿಯಿಂದ ನೀಡಿದ್ದರು. ಅದನ್ನು ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ ನೀಡಲಾಗಿದೆ. ಕೆಲ ರೈತರು ವಿಮೆ ತುಂಬಿದ ಬ್ಯಾಂಕ್​ಗಳಿಗೆ ಬಿಟ್ಟು ಆಧಾರ್​ಲಿಂಕ್ ಆದ ಬ್ಯಾಂಕ್ ಕಡೆಗಳಲ್ಲಿ ಹಣ ಹೋಗಿರುವ ದೂರು ಬಂದಿದೆ. ನಮ್ಮ ಕಚೇರಿಗೆ ಬಂದ ಅಂತಹ ದೂರುಗಳನ್ನು ಪರಿಶೀಲಿಸಿ ಸರಿಪಡಿಸಿದ್ದೇವೆ. ಬೆಳೆ ಮಿಸ್ ಮ್ಯಾಚ್ ಆದ ಪ್ರಕರಣಗಳಿಗೆ ವಿಮೆ ಹಣ ಬರುವುದಿಲ್ಲ.| ತಿಮ್ಮಪ್ಪ, ಯುನೈಟೆಡ್ ಇನ್ಶೂರೆನ್ಸ್ ಕಂಪನಿ ಜಿಲ್ಲಾ ವ್ಯವಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net