ಶ್ರೀರಂಗಪಟ್ಟಣ: ಗೂಡ್ಸ್ ಲಾರಿಯೊಂದು ಕಾರು ಮತ್ತು ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಘಟನೆಯಲ್ಲಿ ಮೂವರು ಶಿಕ್ಷಕಿಯರು ಗಾಯಗೊಂಡಿದ್ದಾರೆ.
ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಶಿಕ್ಷಕಿಯರಾದ ಶೀಲಾ, ಜ್ಯೋತಿ ಹಾಗೂ ಸವಿತಾ ಗಾಯಾಗೊಂಡವರು. ಶುಕ್ರವಾರ ತಾಲೂಕಿನ ದರಸಗುಪ್ಪೆ ಗ್ರಾಮದ ಬಳಿ ಶ್ರೀರಂಗಪಟ್ಟಣ-ಪಾಂಡವಪುರ ಹೆದ್ದಾರಿಯಲ್ಲಿ ಪ್ರತಿನಿತ್ಯ ಶಾಲೆಗೆ ಶಿಕ್ಷಕರನ್ನು ಕರೆದೊಯ್ಯುವ ವಾಹನವು ಶ್ರೀರಂಗಪಟ್ಟಣ ಕಡೆಯಿಂದ ತೆರಳುತ್ತಿತ್ತು. ಪಾಂಡವಪುರ ಕಡೆಯಿಂದ ಆಗಮಿಸುತ್ತಿದ್ದ ಗೂಡ್ಸ್ ವಾಹನ ಮುಂದಿದ್ದ ಕಾರನ್ನು ಹಿಂದಿಕ್ಕುವ ಭರದಲ್ಲಿ ನಿಯಂತ್ರಣ ತಪ್ಪಿ ಹಿಂಬದಿಯಿಂದ ಕಾರಿಗೆ ಮೊದಲು ಡಿಕ್ಕಿ ಹೊಡೆದಿದೆ. ನಂತರ ಎದುರಿನಿಂದ ಆಗಮಿಸಿದ ಶಾಲಾ ವಾಹನಕ್ಕೆ ರಭಸವಾಗಿ ಡಿಕ್ಕಿಯಾಗಿದೆ. ಪರಿಣಾಮ ಮೂವರು ಶಿಕ್ಷಕಿಯರು ಗಾಯಗೊಂಡಿದ್ದಾರೆ.
ತಕ್ಷಣ ಗಾಯಾಳುಗಳನ್ನು ಸ್ಥಳೀಯರು ಆಂಬುಲೆನ್ಸ್ ಮೂಲಕ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯಲಾಗಿದೆ. ಗೂಡ್ಸ್ ಲಾರಿ ಚಾಲಕನನ್ನು ವಾಹನ ಸಮೇತ ವಶಕ್ಕೆ ಪಡೆಯಲಾಗಿದೆ. ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.