

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೂವರು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಪ್ರಕರಣ ಕುತೂಹಲ ಕೆರಳಿಸಿದೆ. ಒಂದೇ ಶಾಲೆಯ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ಮಕ್ಕಳು ಒಂದೇ ತೆರನಾದ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ.
ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸೌಂದರ್ಯ ಸ್ಕೂಲ್ನಲ್ಲಿ ಓದುತ್ತಿದ್ದ 10ನೇ ತರಗತಿಯ ಮೂವರು ವಿದ್ಯಾರ್ಥಿಗಳು ನಾಪತ್ತೆ ಆಗಿದ್ದಾರೆ. ಕಿರಣ್, ಪರೀಕ್ಷಿತ್, ನಂದನ್ ಎಂಬ 15 ವರ್ಷದ ವಿದ್ಯಾರ್ಥಿಗಳು ನಾಪತ್ತೆಯಾದವರು.
ನಿನ್ನೆ ಬೆಳಗ್ಗೆಯೇ ವಾಕಿಂಗ್ ಹೋಗಿದ್ದಾಗ ಇವರು ನಾಪತ್ತೆಯಾಗಿದ್ದು, ಶಾಲೆಗೆ ಹೋಗಿ ವಿಚಾರಿಸಿದಾಗ ಅಲ್ಲಿಗೂ ತೆರಳಿರಲಿಲ್ಲ. ಸಾಕಷ್ಟು ಹುಡುಕಿದರೂ ಸುಳಿವು ಸಿಗದ್ದರಿಂದ ಇಂದು ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.
ನಮಗೆ ಓದಿನಲ್ಲಿ ಆಸಕ್ತಿ ಇಲ್ಲ, ಕ್ರೀಡೆಯಲ್ಲಿ ಆಸಕ್ತಿ ಇದೆ, ಕ್ರೀಡೆಯಲ್ಲೇ ಸಾಧನೆ ಮಾಡಿ ಹೆಚ್ಚು ಹಣ ಗಳಿಸುತ್ತೇವೆ ಎಂದು ಮೂವರು ತಂತಮ್ಮ ಮನೆಯಲ್ಲಿ ಪತ್ರ ಬರೆದಿಟ್ಟು ಹೋಗಿದ್ದಾರೆ. ಮನೆಯಲ್ಲಿದ್ದ ಮೊಬೈಲ್ಫೋನ್ ಕೂಡ ತೆಗೆದುಕೊಂಡು ಹೋಗಿದ್ದು, ಅದು ಸ್ವಿಚ್ಡ್ ಆಫ್ ಆಗಿದೆ ಎಂದು ಕಿರಣ್ ತಂದೆ, ಶೇಷಾದ್ರಿ ಬಡಾವಣೆಯ ನಾಗರಾಜು ಎಂಬವರು ದೂರು ನೀಡಿದ್ದಾರೆ.