

ಮಾಗಡಿ :ತಾಲೂಕಿನ ವೈಜಿಗುಡ್ಡದಲ್ಲಿ ಸೋಮವಾರ ಮಧ್ಯಾಹ್ನ
ಜಲಾಶಯದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಮುಳುಗಿ ಬೆಂಗಳೂರಿನ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.
ಬೆಂಗಳೂರಿನ ಆಸ್ಟೀನ್ ಟೌನ್‌ನ ಸಹೋದರಿಯರಾದ
ಮಧುಮಿತಾ (20), ರಾಘವಿ (18) ಹಾಗೂ ಗಾರೆಪಾಳ್ಯದ ರಮ್ಯಾ (22)ಮೃತರು.
ಗ್ರಾಮದ ಊರ ಹಬ್ಬಕ್ಕೆಂದು ಬಂದಿದ್ದ ಗಾರೆ ಪಾಳ್ಯ ಹಾಗೂ ಅಸ್ಟಿನ್ ಟೌನ್‌ನ ನಿವಾಸಿಗಳು ಗ್ರಾಮಕ್ಕೆ ಹೊಂದಿಕೊಂಡೇ ಇರುವ ಜಲಾಶಯ ವೀಕ್ಷಣೆಗೆಂದು ತೆರಳಿದ್ದರು. ಈ ವೇಳೆ ಜಲಾಶಯದಲ್ಲಿ ತಮ್ಮ ಚೂಡಿದಾರ್ ದುಪ್ಪಟ್ಟಾದಲ್ಲಿ ಮೀನು ಹಿಡಿಯುತ್ತಾ ಆಟವಾಗುತ್ತಿದ್ದಾಗ ಘಟನೆ ಸಂಭವಿಸಿದೆ.
ಮಧುಮಿತಾ ಶಾಂತಿನಗರದ ಜೋಸೆಫ್ ಯೂನಿವರ್ಸಿಟಿ ಕಾಲೇಜಿನಲ್ಲಿ ದ್ವಿತೀಯ ಬಿಎ ವಿದ್ಯಾಭ್ಯಾಸ ಮಾಡುತ್ತಿದ್ದರು. ಯಕ್ಷಗಾನ
ಕಲಾವಿದೆಯಾಗಿರುವ ರಾಘವಿ, ಹಲಸೂರು ಚರಣ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರು. ಮಧುಮಿತಾ ಮತ್ತು ರಾಘವಿ ಸಹೋದರಿಯರಾಗಿದ್ದು, ಇವರ ತಂದೆ ತಾಮರೈ ಕಣ್ಣನ್ ಮಹದೇವಪುರದಲ್ಲಿ ಬ್ಯಾಂಕ್ ನೌಕರರಾಗಿದ್ದಾರೆ.
ಘಟನೆಯಲ್ಲಿ ನಿರ್ಮಲಾ,ರಿನಾ, ದಿವ್ಯಾ, ಚಂದ್ರಿಕಾ
ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಗಿದ್ದೇನು?
ರಮ್ಯಾ, ಮಧುಮಿತಾ, ರಾಘವಿ, ನಿರ್ಮಲಾ, ಚಂದ್ರಿಕಾ, ರಿನಾ, ದಿವ್ಯಾ ಹಾಗೂ ಸೋಮಶೇಖರ್ ಜಲಾಶಯದ ನೀರಿಗೆ ಇಳಿದಿದ್ದರು. ಹತ್ತು ನಿಮಿಷ ನೀರಿನಲ್ಲಿ ಮೀನು ಹಿಡಿಯುವ ಆಟವಾಡಿದ್ದು, ಈ ವೇಳೆ ಮೊದಲು ಮಧುಮಿತ ನೀರಿನಲ್ಲಿ ಮುಳುಗಿದ್ದಾರೆ. ಇವರನ್ನು ರಕ್ಷಿಸಲು ಒಬ್ಬರ ನಂತರ ಮತ್ತೊಬ್ಬರು ಮುಂದಾಗಿ ಉಳಿದ 6 ಮಂದಿಯೂ ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಜತೆಯಲ್ಲಿದ್ದ ದಿವ್ಯಾ ಪತಿ ಸೋಮಶೇಖರ್ ಎಂಬುವರು ನೀರಿನಲ್ಲಿ ಮುಳುಗುತ್ತಿದ್ದ ನಿರ್ಮಲಾ, ದಿವ್ಯಾ, ರಿನಾ ಹಾಗೂ ಚಂದ್ರಿಕಾರನ್ನು ರಕ್ಷಣೆ ಮಾಡಿದ್ದಾರೆ. ಅಷ್ಟರಲ್ಲಾಗಲೇ ಉಳಿದ ಮೂವರ ಪ್ರಾಣಪಕ್ಷಿ ಹಾರಿಹೋಗಿದೆ. ಚಂದ್ರಿಕಾ ಅವರ ಸ್ಥಿತಿ ಗಂಭೀರವಾಗಿದ್ದು, ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ. ಮೃತ ರಮ್ಯಾಗೆ ಆರು ವರ್ಷದ ಮಗುವಿದ್ದು, ನೀರು ಕಂಡರೆ ಭಯಪಡುತ್ತಿದ್ದ ಈ ಮಗು ನೀರಿಗೆ ಇಳಿಯದ ಕಾರಣ ಬದುಕುಳಿದಿದೆ.
ಬಾರದ ಆಂಬುಲೆನ್ಸ್
ನೀರಿನಲ್ಲಿ ಮುಳುಗುತ್ತಿದ್ದಂತೆ ರಕ್ಷಿಸಲು ಸಾಕಷ್ಟು ಕಿರುಚಾಡಿದರೂ ಸ್ಥಳದಲ್ಲಿದ್ದ ಯಾರೂ ರಕ್ಷಣೆಗೆ ಮುಂದಾಗಲಿಲ್ಲ. ಹಾಗೂ ಒಂದು ಗಂಟೆ ಕಳೆದರೂ ಆಂಬುಲೆನ್ಸ್ ಬಾರದ ಕಾರಣ 3 ಜೀವಗಳನ್ನು ಕಳೆದುಕೊಳ್ಳುವಂತಾಯಿತು ಎಂದು ನಿರ್ಮಲಾ
ಆರೋಪಿಸಿದ್ದಾರೆ. ಮೃತದೇಹಗಳನ್ನು ಆಂಬುಲೆನ್ಸ್‌ನಲ್ಲಿ ಮಾಗಡಿ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಮೃತರೆಲ್ಲರೂ ಸಂಬಂಧಿಕರೇ ಆಗಿದ್ದು, ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು. ಹಬ್ಬದ ಮನೆಯಲ್ಲಿ ಈಗ ಶೋಕ ಆವರಿಸಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರ : ಜಿಲ್ಲೆಯ ಕಗ್ಗಲೀಪುರ ಬಳಿ ಸೋಮವಾರ ಚಾಲಕನ ನಿಯಂತ್ರಣ
ತಪ್ಪಿದ ಕೆಎಸ್ ಆರ್‌ಟಿಸಿ ಬಸ್ ಪಕ್ಕದ ರಸ್ತೆಗೆ ನುಗ್ಗಿ ಬೈಕ್‌ಗಳಿಗೆ ಡಿಕ್ಕಿಹೊಡೆದಿದ್ದು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮೃತಪಟ್ಟಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜು (52) ಮೃತರು. ಇವರ ಪುತ್ರಿ ಕಾವ್ಯಾ ಅವರಿಗೆ ತೀವ್ರ ಗಾಯಗಳಾಗಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ
ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಕನಕಪುರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್ ಆರ್‌ಟಿ ಬಸ್ ಚಾಲಕನ ನಿಯಂತ್ರಣ ತಪ್ಪಿ ವಿಭಜಕವನ್ನು ದಾಟಿ ಪಕ್ಕದ ರಸ್ತೆಗೆ ನುಗ್ಗಿದೆ. ಈ ವೇಳೆ ಎದುರಿಗೆ ಬರುತ್ತಿದ್ದ ಎರಡು ಬೈಕ್‌ಗಳಿಗೆ ಡಿಕ್ಕಿಹೊಡೆದ ನಂತರ ಬಸ್ ಪಕ್ಕದ ಹಳ್ಳಕ್ಕೆ ಬಿದ್ದಿದೆ. ಈ ವೇಳೆ ನಾಗರಾಜು ಸ್ಥಳದಲ್ಲಿಯೇ ಮೃತಪಟ್ಟರೆ, ಕಾವ್ಯಾ ಹಾಗೂ ಮತ್ತೊಂದು ಬೈಕ್ ಹಾಗೂ ಬಸ್ಸಿನಲ್ಲಿದ್ದ ಹಲವರಿಗೆ ಗಾಯಗಳಾಗಿವೆ. ಬೆಂಗಳೂರಿನಲ್ಲಿಯೇ ವಾಸವಿದ್ದ ನಾಗರಾಜು, ಕನಕಪುರದ ಮಲ್ಲಪುರ ಗ್ರಾಮಕ್ಕೆ ಪುತ್ರಿಯನ್ನು ಬಿಡಲು ಬೈಕ್‌ನಲ್ಲಿ ತೆರಳುತ್ತಿದ್ದರು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ಗೌಡ, ಡಿವೈಎಸ್‌ಪಿ ಶ್ರೀನಿವಾಸ್ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.