

ರಾಮನಗರ: ಮಾಗಡಿ ತಾಲೂಕಿನ ವೈ.ಜಿ. ಗುಡ್ಡ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಗಾರ್ವೆ ಬಾವಿ ಪಾಲ್ಯದ ನಿವಾಸಿಗಳಾದ ಮಧು (25), ರಾಘವಿ(22) ಹಾಗೂ ರಮ್ಯ(20) ಮೃತಪಟ್ಟಿದ್ದಾರೆ. ವೈ.ಜಿ. ಗುಡ್ಡ ಕಾಲೊನಿಯಲ್ಲಿರುವ ಮೃತ ರಮ್ಯ ಅವರ ಸಹೋದರಿ ದಿವ್ಯ ಅವರ ಮನೆಯಲ್ಲಿ ಹಬ್ಬವಿತ್ತು. ಹಾಗಾಗಿ, ಬೆಂಗಳೂರಿನಿಂದ ರಮ್ಯ ಸೇರಿದಂತೆ ಏಳು ಸಂಬಂಧಿಕರು ಭಾನುವಾರ ಮನೆಗೆ ಬಂದಿದ್ದರು.
ಸೋಮವಾರ ಬೆಳಿಗ್ಗೆ 11.30ರ ಸುಮಾರಿಗೆ ಊರಿನ ಬಳಿ ಇರುವ ಜಲಾಶಯದ ಹಿನ್ನೀರು ನೋಡಲು, ದಿವ್ಯ ಅವರ ಪತಿ ಸೋಮಶೇಖರ್ ಸೇರಿದಂತೆ 8 ಮಂದಿ ಭೇಟಿ ಹೋಗಿದ್ದರು. ಇಬ್ಬರು ಯುವತಿಯರು ಸೇರಿದಂತೆ 7 ಮಹಿಳೆಯರು ಕೈ ಹಿಡಿದುಕೊಂಡು ನೀರಿನಲ್ಲಿ ಆಟವಾಡುತ್ತಾ ಸ್ವಲ್ಪ ಮುಂದಕ್ಕೆ ಹೋಗಿದ್ದಾರೆ. ಆಗ ಆಳವಾದ ಜಾಗದಲ್ಲಿ ಮಧು ಕಾಲು ಕೆಸರಿನಲ್ಲಿ ಸಿಲುಕಿ ಮುಳುಗಲಾರಂಭಿಸಿದ್ದಾರೆ.
ಮಧು ನೆರವಿಗೆ ಮುಂದಾದ ಉಳಿದವರು ಸಹ ನೀರಿನಲ್ಲಿ ಮುಳುಗತೊಡಗಿದ್ದಾರೆ. ದಡದಲ್ಲಿದ್ದ ಸೋಮಶೇಖರ್ ಕೂಡಲೇ ನೀರಿಗೆ ಜಿಗಿದು ನಾಲ್ವರನ್ನು ರಕ್ಷಿಸಿದ್ದಾರೆ. ಅಷ್ಟೊತ್ತಿಗಾಗಲೇ ನೀರೊಳಗೆ ಮುಳುಗಿದ್ದ ಉಳಿದ ಮೂವರನ್ನು ಸಹ ಮೇಲಕ್ಕೆತ್ತಿ ದಡಕ್ಕೆ ಸಾಗಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ನೀರು ಕುಡಿದು ಉಸಿರುಗಟ್ಟಿದ್ದ ಮಧು, ರಾಘವಿ ಹಾಗೂ ರಮ್ಯ ಕೊನೆಯುಸಿರೆಳೆದಿದ್ದರು. ಮೃತರ ಪೈಕಿ ಮಧು ಮತ್ತು ರಾಘವಿ ಬೆಂಗಳೂರಿನಲ್ಲಿ ಪದವಿ ಓದುತ್ತಿದ್ದರು ಎಂದು ಮಾಗಡಿ ಠಾಣೆ ಪೊಲೀಸರು ತಿಳಿಸಿದರು.