ಕಾರು ಅಪಘಾತದಲ್ಲಿ ಮೂವರ ಸಾವು

ACCIDENT
Published on

ಮುಂಡಗೋಡ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಹೋದರರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಮತ್ತೊರ್ವ ಹುಬ್ಬಳ್ಳಿ ಕಿಮ್ಸನಲ್ಲಿ ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ಜರುಗಿದೆ.
ಪಟ್ಟಣದ ಬಸವನಬೀದಿ ನಿವಾಸಿಗಳಾದ ಗಣೇಶ ಶಿವಾನಂದ ಗಾಣಿಗೇರ(27), ವಿರೇಶ ಶಿವಾನಂದ ಗಾಣಿಗೇರ(26), ಶಂಕರಯ್ಯ ಮಲ್ಲಯ್ಯ ಹಿರೇಮಠ(25) ಸಾವನ್ನಪ್ಪಿದ ಯುವಕರು. ಗೌತಮ ಫಣಿರಾಜ ಹದಳಗಿ(26), ಪ್ರವೀಣ ಅರುಣ ಭಟ್ಕಳಕರ (25) ಎಂಬುವವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ ರಾತ್ರಿ ಐದುಜನ ಸ್ನೇಹಿತರು ಸೇರಿ ಕಾರ್​ನಲ್ಲಿ ತಾಲೂಕಿನ ಪಾಳಾ ಗ್ರಾಮದಲ್ಲಿ ನಡೆಯುತ್ತಿರುವ ಮಾರಿಕಾಂಬಾದೇವಿ ಜಾತ್ರೆ ತೆರಳುವ ವೇಳೆ ಪಾಳಾ ಗ್ರಾಮದ ಸನಿಹದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಪಕ್ಕದಲ್ಲಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರ್ ಚಲಾಯಿಸುತ್ತಿದ್ದ ಗಣೇಶ ಗಾಣಿಗೇರ ಹಾಗೂ ಹಿಂಬದಿ ಕುಳಿತಿದ್ದ ವಿರೇಶ ಗಾಣಿಗೇರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ತೀವ್ರ ಗಾಯಗೊಂಡಿದ್ದ ಮೂವರನ್ನು ಹುಬ್ಬಳ್ಳಿಯ ಕಿಮ್ಸಗೆ ದಾಖಲಿಸಲಾಗಿತ್ತು ಗುರುವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೇ ಶಂಕ್ರಯ್ಯ ಹಿರೇಮಠ ಸಾವನ್ನಪ್ಪಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net