

ಹೊಳೆನರಸೀಪುರ: ತಾಲೂಕಿನ ಕಸಬಾ ಹೋಬಳಿ ಐಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮೀಪುರ ಗ್ರಾಮದಲ್ಲಿ ಮೂವರಿಗೆ ಬೀದಿ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿವೆ.
ಸೋಮವಾರ ಸಂಜೆ ಕೂಲಿ ಕೆಲಸ ಮುಗಿಸಿ ಮನೆಗಳಿಗೆ ತೆರಳುವ ವೇಳೆ ಬೀದಿ ನಾಯಿಗಳು ಏಕಾಏಕಿ ಗ್ರಾಮದ ಜವರಯ್ಯ, ಜ್ಯೋತಿ, ಚಿರು ಚೆಲುವಯ್ಯ ಎಂಬುವರ ಮೇಲೆ ದಾಳಿ ನಡೆಸಿವೆ. ಇದರಿಂದ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ. ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ಕೂಡಲೇ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಯಿಂದ ಆತಂಕಗೊಂಡಿರುವ ಸ್ಥಳೀಯರು ಬೀದಿ ನಾಯಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಲಕ್ಷ್ಮೀಪುರ ಗ್ರಾಮದ ಸಮೀಪದಲ್ಲಿ ಪುರಸಭೆಯ ತ್ಯಾಜ್ಯ ಸಂಗ್ರಹ ಘಟಕ ಇರುವುದರಿಂದ ನಾಯಿಗಳ ಹಾವಳಿ ಮಿತಿಮೀರಿದೆ. ಪಟ್ಟಣದ ಕಸ ಸುರಿಯುವ ಸ್ಥಳದಲ್ಲಿ ದೊರೆಯುವ ಆಹಾರವನ್ನು ತಿಂದು ಸಮೀಪದಲ್ಲಿ ಅಡ್ಡಾಡುತ್ತಿವೆ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆತಂಕ ಮನೆ ಮಾಡಿದೆ. ಗ್ರಾಮದಲ್ಲಿ ನಾಯಿಗಳ ಹಾವಳಿ ತಪ್ಪಿಸಬೇಕು ಇಲ್ಲದಿದ್ದರೆ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಜತೆಗೆ ಗಾಯಾಳುಗಳಿಗೆ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಪರಮೇಶ್, ಈಶ್ವರ, ಸುರೇಶ್, ಚೆಲುವರಾಜ್ ಇತರರು ಇದ್ದರು.