

ಮೈಸೂರು: ವನ್ಯಜೀವಿಯ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಮೈಸೂರಿನಲ್ಲಿ ಅರಣ್ಯ ಸಂಚಾರ ದಳದ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಆಂಧ್ರಪ್ರದೇಶ ಮೂಲದವರಾಗಿದ್ದು, ಅವರ ಬಳಿಯಿಂದ ಜಿಂಕೆ ಜಾತಿಯ ಪ್ರಾಣಿಯ ಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಪಲಮನೇರ್ ತಾಲ್ಲೂಕಿನ ಶಿಕಾರಿ ಕಾಲೋನಿಯ ನಿವಾಸಿಗಳಾದ ಕುಟ್ಟಿಯಪ್ಪ, ವಿಜಯಕಾಂತ್ ಮತ್ತು ಕಮಲಹಾಸನ್ ಎಂಬುವರು, ಮೈಸೂರು ವಿಶ್ವವಿದ್ಯಾನಿಲಯದ ಕಾಫರ್ಡ್ ಭವನದಿಂದ ಕುಕ್ಕರಹಳ್ಳಿ ಕೆರೆ ಕಡೆಗೆ ಹೋಗುವ ರಸ್ತೆಯಲ್ಲಿ ಪ್ರಾಣಿಯ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದರು ಎನ್ನಲಾಗಿದೆ.
ಹಕ್ಕಿ ಪಿಕ್ಕಿ ಜನಾಂಗಕ್ಕೆ ಸೇರಿದ ಆರೋಪಿಗಳು, ತಮ್ಮ ಗ್ರಾಮದ ಸನಿಹದ ಅರಣ್ಯದಲ್ಲಿ ಬೇಟೆಯಾಡಿದ್ದ ಜಿಂಕೆ ಜಾತಿಯ ಪ್ರಾಣಿಯ ಚರ್ಮವನ್ನು ಮಾರಾಟ ಮಾಡಲು ಮೈಸೂರಿಗೆ ಬಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.