

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ವಿಚಾರಣಾಧೀನ ಖೈದಿಯಾಗಿರುವ ನಟ ದರ್ಶನ್ ಕಳೆದ 66 ದಿನಗಳಿಂದ ಜೈಲಿನಲ್ಲಿದ್ದಾರೆ. ಜೈಲಿನಲ್ಲಿರುವ ಪ್ರತಿಯೊಬ್ಬ ಕೈದಿಗೂ ಇರುವಂತ ನಿಯಮಗಳು ಸ್ಯಾಂಡಲ್ವುಡ್ ನಟ ದರ್ಶನ್ಗೆ ಅನ್ವಯವಾಗುವುದಿಲ್ಲವೇ ಎಂಬುದು ಎಲ್ಲರ ಗುಮಾನಿ ಆಗಿದೆ. ಇದಕ್ಕೆ ಕಾರಣ ಪರಪ್ಪನ ಅಗ್ರಹಾರದಲ್ಲಿ ದರ್ಶನ್ಗೆ ಎಲ್ಲಾ ಸೌಲಭ್ಯಗಳನ್ನು ನೀಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿರುವುದು.
ಕಾನೂನು ಉಲ್ಲಂಘನೆ ಆಗಿದೆ ಎಂಬುದಕ್ಕೆ ಭಾನುವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ ಮತ್ತು ವಿಡಿಯೋ ಕಾಲ್ ಸಾಕ್ಷಿಯಾಗಿದೆ. ಮೊದಲು ವೈರಲ್ ಆದ ಫೋಟೋದಲ್ಲಿ ಜೈಲಿನಲ್ಲಿ ಬೆಂಗಳೂರಿನ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜತೆಗೆ ದರ್ಶನ್ ಒಂದು ಕೈನಲ್ಲಿ ಕಾಫಿ ಮಗ್ ಮತ್ತು ಇನ್ನೊಂದು ಕೈನಲ್ಲಿ ಸಿಗರೇಟ್ ಹಿಡಿದುಕೊಂಡಿರುವುದನ್ನು ಕಾಣಬಹುದಾಗಿದೆ. ಬಳಿಕ ಮತ್ತೊಂದು ವಿಡಿಯೋ ಲೀಕ್ ಆಗಿದೆ. ಅದರಲ್ಲಿ ದರ್ಶನ್ ಯಾರೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿದ್ದಾರೆ.
ಇಂದು (ಆಗಸ್ಟ್ 26) ಬೆಳಗ್ಗೆ ಮತ್ತೊಂದು ಫೋಟೊ ಲೀಕ್ ಆಗಿದ್ದು ಅದರಲ್ಲಿ ಬೆಡ್ ಮೇಲೆ ಕುಳಿತುಕೊಂಡಿರುವ ದರ್ಶನ ಅವರ ಕೈಯಲ್ಲಿ ಮೊಬೈಲ್ ಇದೆ ಎನ್ನಲಾಗಿದೆ. ವೈರಲ್ ಆಗಿರುವ ಫೋಟೋ ಮತ್ತು ವಿಡಿಯೋದಲ್ಲಿ ವಿಗ್ ಇಲ್ಲದೆಯೇ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಸಾಮ್ಯತೆಯನ್ನು ಗುರುತಿಸುವುದರಿಂದಲೇ ಆ ವಿಡಿಯೋ ಮತ್ತು ಫೋಟೋ ದರ್ಶನ್ ಅವರದ್ದೇ ಎಂದು ಹೇಳಲಾಗುತ್ತಿದೆ. ಇದು ದರ್ಶನ್ ಅವರ ವಿಚಾರದಲ್ಲಿ ಜೈಲಿನ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬುದು ಪ್ರಶ್ನೆಯಾಗಿದೆ.
ಕಾನೂನು ಉಲ್ಲಂಘನೆ ಆಗಿರುವ ಕಾರಣ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಈ ಮೂರೂ ಎಫ್ಐಆರ್ನಲ್ಲಿಯೂ ದರ್ಶನ್ ಹೆಸರು ಪ್ರಸ್ತಾಪ ಆಗಿದೆ. ಒಂದು ಸಿಗರೇಟ್ ಕೊಟ್ಟಿದ್ದಕ್ಕೆ, ಇನ್ನೊಂದು ವಿಡಿಯೋ ಕಾಲ್ ಮಾಡಿರುವುದಕ್ಕೆ, ಮತ್ತೊಂದು ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಸಂಬಂಧು ಮೂರು ಎಫ್ಐಆರ್ ದಾಖಲಾಗಿದೆ. ಕೊಲೆ ಆರೋಪಿಗಳಾದ ದರ್ಶನ್, ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ದರ್ಶನ್ ಆಪ್ತ ನಾಗರಾಜ್ ವಿರುದ್ಧ ಒಂದು ಎಫ್ಐಆರ್ ದಾಖಲಾಗಿದೆ. ಜೈಲು ಅಧೀಕ್ಷಕರ ದೂರು ಆಧರಿಸಿ ಮೂರು ಎಫ್ಐಆರ್ ದಾಖಲಾಗಿದ್ದು, ಈ ಹೊಸ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.
ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಆತನನ್ನು ಬೆಂಗಳೂರಿಗೆ ಕರೆಸಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ದರ್ಶನ್ ಆ್ಯಂಡ್ ಗ್ಯಾಂಗ್ ಮೇಲಿದೆ. 66 ದಿನಗಳಿಂದ ಜೈಲಿನಲ್ಲಿರುವ ದರ್ಶನ್ಗೆ ಈ ಹೊಸ ಪ್ರಕರಣದಿಂದ ಜಾಮೀನು ಪಡೆಯುವಲ್ಲಿ ಮತ್ತಷ್ಟು ಸಂಕಷ್ಟಗಳು ಎದುರಾಗಲಿವೆ.