ಸಂಸದೆ ಕಂಗನಾ ರಣಾವತ್​ಗೆ ಛೀಮಾರಿ ಹಾಕಿದ ಬಿಜೆಪಿ; ವಿವಾದ ಸೃಷ್ಟಿಸುವ ಹೇಳಿಕೆ ನೀಡದಂತೆ ವಾರ್ನಿಂಗ್​​

Untitled-design-2024-08-26T170110.158-1
Published on

ನವದೆಹಲಿ: ಪ್ರಧಾನಿ ಮೋದಿ ಸರ್ಕಾರವು ತೆಗೆದುಕೊಂಡ ಬಲವಾದ ಕ್ರಮಗಳಿಲ್ಲದಿದ್ದರೆ ರೈತರ ಪ್ರತಿಭಟನೆಯು ಭಾರತದಲ್ಲಿ ಪ್ರಸ್ತುತ ಬಾಂಗ್ಲಾದೇಶದಲ್ಲಿರುವ ಪರಿಸ್ಥಿತಿಯನ್ನು ಸೃಷ್ಟಿಸುತಿತ್ತು ಎಂದು ಮಂಡಿ ಸಂಸದೆ ಕಂಗನಾ ರಣಾವತ್​ ನೀಡಿರುವ ಹೇಳಿಕೆಯು ವಿವಾದವನ್ನು ಉಂಟುಮಾಡಿದೆ.

ಕಂಗನಾ ರಣಾವತ್​​ ಹೇಳಿಕೆಗೆ ಛೀಮಾರಿ ಹಾಕಿದ ಬಿಜೆಪಿ ರೈತರ ಪ್ರತಿಭಟನೆ ಕುರಿತ ಬಿಜೆಪಿ ಸಂಸದೆ ಕಂಗನಾ ರಣಾವತ್​ ಅವರ ಹೇಳಿಕೆಯು ಪಕ್ಷದ ನಿಲುವಲ್ಲ. ಬಿಜೆಪಿಯ ನೀತಿ ವಿಷಯಗಳ ಬಗ್ಗೆ ಮಾತನಾಡಲು ಅವರಿಗೆ ಅನುಮತಿ ಇಲ್ಲ. ಭಾರತೀಯ ಜನತಾ ಪಕ್ಷವು ಸಬ್ಕಾ ಸಾಥ್​​, ಸಬ್ಕಾ ವಿಕಾಸ್​​, ಸಬ್ಕಾ ವಿಶ್ವಾಸ್​​ ಔರ್​ ಸಬ್ಕಾ ಪ್ರಯಾಸ್​ ಧ್ಯೇಯವಾಕ್ಯದಂತೆ ಸಾಮಾಜಿಕ ಸಾಮರಸ್ಯದ ಕಡೆಗೆ ಬದ್ಧವಾಗಿದೆ ಎಂದು ಹೇಳಿದೆ. ಅಲ್ಲದೆ ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಸ್ವಪಕ್ಷದವರೇ ಆದ ಕಂಗನಾ ರಣಾವತ್​​ಗೆ ಬಿಜೆಪಿ ಸೂಚಿಸಿದೆ.

ರೈತರ ಬಗ್ಗೆ ಮಾತನಾಡುವುದು ಕಂಗನಾ ಅವರ ಇಲಾಖೆ ಅಲ್ಲ. ಇದು ಅವರ ವೈಯಕ್ತಿಕ ಹೇಳಿಕೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ರೈತಸ್ನೇಹಿಯಾಗಿದೆ. ಕಂಗನಾ ಇಂತಹ ಹೇಳಿಕೆಗಳನ್ನು ನೀಡಬಾರದು, ಇಂತಹ ಹೇಳಿಕೆಗಳಿಂದ ದೂರವಿರಬೇಕು ಎಂದು ಪಂಜಾಬ್ ಬಿಜೆಪಿ ನಾಯಕ ಹರ್ಜೀತ್ ಸಿಂಗ್ ಗ್ರೆವಾಲ್ ಹೇಳಿದರು. ಅಲ್ಲದೆ ಬಿಜೆಪಿ ನಾಯಕರು ಕಂಗನಾ ಅವರ ಈ ಹೇಳಿಕೆ ವಿರುದ್ಧ ಉನ್ನತ ನಾಯಕತ್ವಕ್ಕೆ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೈತರ ಬಗ್ಗೆ ಕಂಗನಾ ರಣಾವತ್​​ ಈ ರೀತಿಯ ಹೇಳಿಕೆ ನೀಡುತ್ತಿರುವುದು ಇದೇ ಮೊದಲೆನಲ್ಲ. ಈ ಮೊದಲು 2020ರಲ್ಲಿ ಕೃಷಿ ವಿರೋಧಿ ಕಾನೂನುಗಳ ಪ್ರತಿಭಟನೆಯ ವೇಳೆ ಪಂಜಾಬ್​​ನ ಮಹಿಳಾ ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಆ ಸಮಯದಲ್ಲಿ ಅದು ದೊಡ್ಡ ವಿವಾದವನ್ನು ಸೃಷ್ಟಿಸಿತ್ತು.

ಪ್ರಸ್ತುತ ರೈತ ಪ್ರತಿಭಟನೆ ಬಗ್ಗೆ ಕಂಗನಾ ರಣಾವತ ನೀಡಿರುವ ಹೇಳಿಕೆ ಹೀಗಿದೆ. ನಮ್ಮ ಉನ್ನತ ನಾಯಕತ್ವ ದುರ್ಬಲವಾಗಿದ್ದರೆ ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿ ಬರಬಹುದಿತ್ತು. ರೈತ ಚಳವಳಿಯ ಸಮಯದಲ್ಲಿ ಏನಾಯಿತು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರವನ್ನು ಹರಡಲಾಯಿತು. ಅಲ್ಲಿ ಅತ್ಯಾಚಾರಗಳು ನಡೆಯುತ್ತಿದ್ದವು, ಜನರನ್ನು ಕೊಲ್ಲಲಾಯಿತು. ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಕಂಗನಾ, ಮಸೂದೆಯನ್ನು ಹಿಂತೆಗೆದುಕೊಂಡಾಗ ಎಲ್ಲಾ ಕಿಡಿಗೇಡಿಗಳು ಬೆಚ್ಚಿಬಿದ್ದರು. ಏಕೆಂದರೆ ಅವರ ಯೋಜನೆ ಬಹಳ ದೀರ್ಘವಾಗಿತ್ತು ಎಂದು ಹೇಳಿದ್ದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net