ರಸ್ತೆ ಅಪಘಾತದಲ್ಲಿ ಮೂವರು ಸಾವು

FotoJet
Published on

 ಬೆಂಗಳೂರು- ಮೈಸೂರು ಸರ್ವಿಸ್ ರಸ್ತೆಯಲ್ಲಿ ಅವಘಡ

ಚನ್ನಪಟ್ಟಣ : ತಾಲೂಕಿನ ತಿಟ್ಟಮಾರನಹಳ್ಳಿ ಬಳಿಯ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ನ ಸರ್ವಿಸ್ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಕಾರು ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ತಾಯಿ ಮಗಳು ಸೇರಿ ಮೂವರು ಮೃತಪಟ್ಟಿದ್ದಾರೆ.

ಚಾಲಕ ಶಿವಪ್ರಕಾಶ್ (37), ತಾಲೂಕಿನ ಮಂಗಾಡಹಳ್ಳಿಯ ಪುಟ್ಟಗೌರಮ್ಮ (72), ಶಿವರತ್ನ (50) ಮೃತರು.

ಕಾರಿನಲ್ಲಿದ್ದ ನಟರಾಜು ಹಾಗೂ ಸುಮಾ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಹಾಗೂ ರಾಮನಗರ ಕಡೆ ಹೆಂಚು ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ಮುಖಾಮುಖಿ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.

ಸಾವಿಗೆ ಹೋಗುತ್ತಿದ್ದವರು ಮಸಣಕ್ಕೆ!

ತಾಲೂಕಿನ ಮಂಗಾಡಹಳ್ಳಿಯ ನಿವಾಸಿಗಳು ಬೆಂಗಳೂರಿನಲ್ಲಿ ವಾಸವಾಗಿದ್ದು, ಮಂಡ್ಯದಲ್ಲಿ ತಮ್ಮಸಂಬಂಧಿಕರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ತಾಯಿ ಪುಟ್ಟಗೌರಮ್ಮ, ಮಗಳು ಶಿವರತ್ನ, ಮಗ ನಟರಾಜು, ಸೊಸೆ ಸುಮಾ ಸೇರಿ ಇಡೀ ಕುಟುಂಬ ಮಂಡ್ಯಕ್ಕೆ ತೆರಳುತಿತ್ತು. ಕಾರು ಚಾಲನೆಗಾಗಿ ಮನೆ ಪಕ್ಕದ ನಿವಾಸಿ ಶಿವಪ್ರಕಾಶ್ ಎಂಬುವವರನ್ನು ಕರೆದುಕೊಂಡಿದ್ದರು. ಎಕ್ಸ್‌ಪ್ರೆಸ್ ಹೈವೇಯಲ್ಲಿ ಹೋಗಬೇಕಾದವರು ಸರ್ವಿಸ್ ರಸ್ತೆಯಲ್ಲಿ ಬಂದಿದ್ದು, ಎದುರುಗಡೆ ಬಂದ ಕ್ಯಾಂಟರ್ ವಾಹನ ಡಿಕ್ಕಿಯಾಗಿ ಚಾಲಕ ಹಾಗೂ ತಾಯಿಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಕ್ಯಾಂಟರ್ ಚಾಲಕ ನಾಗೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ.

ಅಪಘಾತ ಸ್ಥಳಕ್ಕೆ ಎಸ್ಪಿ ಶ್ರೀನಿವಾಸಗೌಡ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದ್ದು, ತಾಯಿ-ಮಗಳ ಅಂತ್ಯಕ್ರಿಯೆ ಮಂಗಾಡಹಳ್ಳಿಯಲ್ಲಿ ಗುರುವಾರ ಸಂಜೆ ನೆರವೇರಿತು. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net