

ಚಿಂತಾಮಣಿ: ತಾಲೂಕಿನ ಕೈವಾರ ಕ್ರಾಸ್ ಸಮೀಪದ ಕೊಂಗನಹಳ್ಳಿ ಬಳಿ ಸೋಮವಾರ ಬೆಳಗ್ಗೆ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ.
ದ್ವಿಚಕ್ರವಾಹನ ಸವಾರ ಕೋಲಾರ ತಾಲೂಕಿನ ಮಾರ್ಜೇನಹಳ್ಳಿಯ ಕೃಷ್ಣಪ್ಪ (50) ಮತ್ತು ಕಾರಿನಲ್ಲಿದ್ದ ಶ್ರೀಧರ್ ಮತ್ತು ಜಯಲಕ್ಷ್ಮೀ ಗಾಯಗೊಂಡವರು.
ಕಾರು ತಾಲೂಕಿನ ಕೆಂಚಾರ‌್ಲಹಳ್ಳಿಯಿಂದ ಚಿಂತಾಮಣಿ ಮೂಲಕ ಬೆಂಗಳೂರಿಗೆ ಹೋಗುತ್ತಿದ್ದರೆ, ದ್ವಿಚಕ್ರ ವಾಹನ ಸವಾರ ಕೊಂಗನಹಳ್ಳಿಯಿಂದ ಮುಖ್ಯರಸ್ತೆಗೆ ಪ್ರವೇಶಿಸಿದಾಗ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಂತರ ರಸ್ತೆಯ ಪಕ್ಕದ ಮೋರಿಗೆ ಗುದ್ದಿದ ಪರಿಣಾಮ ಜಖಂಗೊಂಡಿದೆ, ದ್ವಿಚಕ್ರ ವಾಹನ ಸಹ ಜಖಂಗೊಂಡಿದೆ.
ಗಾಯಾಳು ಕೃಷ್ಣಪ್ಪ ಅವರನ್ನು ಚಿಕಿತ್ಸೆಗಾಗಿ ಕೋಲಾರ ಆಸ್ಪತ್ರೆ ಸೇರಿಸಲಾಗಿದೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.