ಗಂಗರ ಕಾಲದ ಮೂರು ವೀರಗಲ್ಲು ಪತ್ತೆ

shidlaghatta
Published on

 ಶಿಡ್ಲಘಟ್ಟ: ತಾಲೂಕಿನ ಹಂಡಿಗನಾಳ ಗ್ರಾಮದ ಹೊರವಲಯದಲ್ಲಿ ಸುಮಾರು 9 ರಿಂದ 10ನೇ ಶತಮಾನದ ಗಂಗರ ಕಾಲದ ಅಪರೂಪದ ಮೂರು ವೀರಗಲ್ಲುಗಳನ್ನು ಪತ್ತೆ ಹಚ್ಚಲಾಗಿದೆ.

ಪುರಾತತ್ವ ಇಲಾಖೆಯಿಂದ ಶಿಡ್ಲಟ್ಟ ತಾಲೂಕಿನಲ್ಲಿ ಗ್ರಾಮವಾರು ಸರ್ವೇಗಾಗಿ ಆಗಮಿಸಿದ್ದ ಶಾಸನ ತ ಕೆ.ಧನಪಾಲ್​ ಹಾಗೂ ಸ್ಥಳಿಯರಾದ ಎ.ಎಂ.ತ್ಯಾಗರಾಜ್​ ಮತ್ತು ಅರುಣ್​ ಕುಮಾರ್​ ನೆರವಿನಿಂದ ಈ ವೀರಗಲ್ಲುಗಳನ್ನು ಪತ್ತೆಹಚ್ಚಿದ್ದಾರೆ.

ಮೂರು ವೀರಗಲ್ಲುಗಳಲ್ಲಿಯೂ ಕುಂಭದ ಚಿತ್ರವಿರುವುದರಿಂದ ಇವು ಗಂಗರ ಕಾಲದ್ದೆಂದು ತಿಳಿದುಬರುತ್ತದೆ. ಹಸುಗಳ ಚಿತ್ರವಿರುವುದರಿಂದ ಇವು ತುರುಗೋಳ್​ ವೀರಗಲ್ಲುಗಳು ಅಂದರೆ, ಗೋವುಗಳ ರಕ್ಷಣೆಗಾಗಿ ಹೋರಾಡಿ ವೀರ ಮರಣ ಹೊಂದಿದ್ದಾನೆ ಎಂದು ಅರ್ಥೈಸಲಾಗಿದೆ.

ಒಂದು ವೀರಗಲ್ಲಿನಲ್ಲಿ ವೀರ, ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಬಿಲ್ಲು ಹಿಡಿದು ಎದುರಾಳಿ ವಿರುದ್ಧ ಹೋರಾಡುತ್ತಿದ್ದಾನೆ. ವೀರನ ಅಂಗಸೌಷ್ಟವವನ್ನು ಶಿಲ್ಪಿ ಅದ್ಭುತವಾಗಿ ಕೆತ್ತಿದ್ದಾನೆ. ವೀರ ಕೊಂದಿರುವ ಎದುರಾಳಿಗಳು ಅವರ ಕಾಲ ಬಳಿ ಬಿದ್ದಿರುವುದನ್ನು ಕಾಣಬಹುದಾಗಿದೆ. ಸತ್ತ ವೀರನನ್ನು ಇಬ್ಬರು ಅಪ್ಸರೆಯರು ಸ್ವರ್ಗಕ್ಕೆ ಕರೆದೊಯ್ಯುವ ಚಿತ್ರಣವೂ ಇದೆ.

ಎರಡನೇ ವೀರಗಲ್ಲಿನಲ್ಲಿ ಸೂರ್ಯ ಚಂದ್ರ ಇರುವವರೆಗೂ ಈ ವೀರನ ಇತಿಹಾಸ ಶಾಶ್ವತವಾಗಿರಲಿ ಎಂಬ ಉದ್ದೇಶದಿಂದ ಸೂರ್ಯ ಚಂದ್ರರನ್ನು ಕೆತ್ತಲಾಗಿದೆ. ವೀರಾವೇಶದಿಂದ ಹೋರಾಡುತ್ತಿರುವ ಶರೀರಕ್ಕೆ ಬಾಣಗಳು ನಾಟಿರುವುದನ್ನು ಕಾಣಬಹುದಾಗಿದೆ. ಅವನ ಶೌರ್ಯದ ಪ್ರತಿಕವಾಗಿ ತುರುಬನ್ನು ಕಟ್ಟಿರುವ ಬಟ್ಟೆ ಗಾಳಿಗೆ ಹಾರಾಡುವುದನ್ನು ಸಹ ಶಿಲ್ಪಿ ಕೆತ್ತಿದ್ದಾನೆ. ಈ ವೀರನೊಂದಿಗೆ ಹೋರಾಡುವ ಎದುರಾಳಿಗಳು ಕುದುರೆ ಮೇಲೆ ಬಂದಿರುವುದನ್ನು ನೋಡಿದಾಗ, ಬಹುಶಃ ರಾಜನ ಆಡಳಿತದಲ್ಲಿ ಈ ವೀರ ಪ್ರಮುಖ ಹುದ್ದೆಯಲ್ಲಿದ್ದ ಎಂದು ಊಹಿಸಬಹುದಾಗಿದೆ.

ಮೂರನೇ ವೀರಗಲ್ಲಿನಲ್ಲಿ ವೀರನ ಒಂದು ಕೈಯಲ್ಲಿ ಗಂಗರ ಕಾಲದ ಅದ್ಭುತವಾದ ಖಡ್ಗವಿದ್ದರೆ, ಮತ್ತೊಂದು ಕೈಯಲ್ಲಿ ವಿಶಿಷ್ಟವಾದ ಗುರಾಣಿಯಿದೆ. ಈ ಶಿಲ್ಪದ ಇನ್ನೊಂದು ವಿಶೇಷವೆಂದರೆ ಎದುರಾಳಿಗಳ ದೇಹ ಎರಡು ತುಂಡಾಗುವ ಹಾಗೆ ವೀರ ಕತ್ತರಿಸಿರುವುದನ್ನು ಶಿಲ್ಪಿ ಅತ್ಯಂತ ನೈಜವಾಗಿ ಕೆತ್ತಿದ್ದಾನೆ. ಇದರಿಂದ ವೀರನ ಶೌರ್ಯ ಮತ್ತು ಅವನ ಆಯುಧದ ಶಕ್ತಿ ತಿಳಿಯುತ್ತದೆ.

ಒಟ್ಟಾರೆಯಾಗಿ ಗೋವುಗಳ ರಕ್ಷಣೆಗಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿರುವ ಮೂವರು ವೀರರ ಅಪರೂಪದ, ಒಂದು ಸಾವಿರ ವರ್ಷಗಳಿಗೂ ಹಿಂದಿನ ವೀರಗಲ್ಲುಗಳಿವು ಎಂದು ಶಾಸನತ ಕೆ.ಧನಪಾಲ್​ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net