ತಾರಕ ಭರ್ತಿಗೆ ಮೂರು ಅಡಿ ಬಾಕಿ

ತಾರಕ ಭರ್ತಿಗೆ ಮೂರು ಅಡಿ ಬಾಕಿ
Published on

ಎಚ್.ಡಿ.ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶ ಹಾಗೂ ಕೊಡಗಿನ ಕುಟ್ಟ ಭಾಗದಲ್ಲಿ ಭಾರಿ ಮಳೆ ಬೀಳುತ್ತಿರುವುದರಿಂದ ಸಾರಥಿ ಹೊಳೆ ಮೂಲಕ ತಾಲೂಕಿನ ತಾರಕ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯ ಭರ್ತಿಗೆ ಮೂರು ಅಡಿ ಮಾತ್ರ ಬಾಕಿ ಇದೆ.

ತಾರಕ ಜಲಾಶಯದ ಸರಾಸರಿ ಮಟ್ಟ 2425 ಅಡಿ ಇದ್ದು ಪ್ರಸ್ತುತ 2422 ಅಡಿ ಇದೆ. ಜಲಾಶಯಕ್ಕೆ ಐದು ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯ ಭರ್ತಿ ನೋಡಿಕೊಂಡು ನದಿಗೆ ನೀರು ಬಿಡಲಾಗುತ್ತದೆ ಎಂದು ನೀರಾವರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಲಾಶಯದಲ್ಲಿ 3.94 ಟಿಎಂಸಿ ನೀರು ಶೇಖರಣೆ ಮಾಡಬಹುದಾಗಿದ್ದು ಪ್ರಸ್ತುತ ಜಲಾಶಯದಲ್ಲಿ 3.70 ಟಿಎಂಸಿ ನೀರನ್ನು ಶೇಖರಣೆ ಮಾಡಲಾಗಿದೆ.

2019ರ ನಂತರದಲ್ಲಿ ಈ ವರ್ಷ ಜಲಾಶಯ ಭರ್ತಿ ಆಗಿದೆ.

ತಾರಕ ಜಲಾಶಯ ಭರ್ತಿ ಆಗಿರುವುದರಿಂದ ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ತಾರಕ ಜಲಾಶಯದಿಂದ ತಾಲೂಕಿನ 17,400 ಎಕರೆ ಪ್ರದೇಶಕ್ಕೆ ನೀರು ಕೊಡಬಹುದಾಗಿದ್ದು, ನಾಲೆಗಳ ದುರಸ್ತಿ ಕಾರಣದಿಂದ ಕೊನೆ ಭಾಗದ ರೈತರಿಗೆ ನೀರು ನೀಡಲು ಸಾಧ್ಯ ಆಗುತ್ತಿಲ್ಲ. ಈಗಾಗಲೇ ಶಾಸಕರು ನಾಲೆಗಳ ಪುನಶ್ಚೇತನ ಕಾಮಗಾರಿ ಮಾಡಲು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬಂದ ಮುಖ್ಯಮಂತ್ರಿಗಳಿಗೆ 50 ಕೋಟಿ ರೂ. ಅನುದಾನಕ್ಕೆ ಮನವಿ ಸಲ್ಲಿಸಿದ್ದಾರೆ.

ರೈತರ ಬೆಳೆ ಜಲಾವೃತ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಶನಿವಾರ ರಾತ್ರಿ ನಿರಂತರವಾಗಿ ಮಳೆ ಸುರಿದ ಕಾರಣ ಜಲಾಶಯಕ್ಕೆ ಒಳ ಹವು ಹೆಚ್ಚಿದ್ದು, ನೀರಾವರಿ ಅಧಿಕಾರಿಗಳು ಭಾನುವಾರ ಬೆಳಗಿನ ಜಾವ ಒಂದುವರೆ ಗಂಟೆಗೆ ಮೂರು ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟಿದ್ದಾರೆ. ನಾಲ್ಕು ಗಂಟೆಗೆ ಜಲಾಶಯದಿಂದ 9 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟಿದರಿಂದ ಜಲಾಶಯದ ಮುಂಭಾಗದ ತಾರಕ ಹಿರೇಹಳ್ಳಿ ಸೇತುವೆ ಮತ್ತು ಕಟ್ಟೆಮನುಗನಹಳ್ಳಿ ಗ್ರಾಮದ ಎಚ್.ಡಿ.ಕೋಟೆ ಮೊತ್ತ ಸಂಪರ್ಕ ಸೇತುವೆ ಮುಳುಗಡೆ ಆಗಿತ್ತು. ನಾಲ್ಕು ಗಂಟೆಗಳ ಕಾಲ ನೀರು ಹರಿಸಿ ನಂತರ ನಿಲ್ಲಿಸಲಾಯಿತು. ಬೆಳಗಾಗುವುದೊರಳಗೆ ಜಲಾಶಯದಿಂದ ಬಾರಿ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಟ್ಟಿದರಿಂದ ನದಿ ಪಾತ್ರದಲ್ಲಿ ರೈತರು ಬೆಳೆದ ಜೋಳ, ಹತ್ತಿ, ಹೊಗೆಸೊಪ್ಪು ಸೇರಿದಂತೆ ಅಪಾರ ಪ್ರಮಾಣದ ಬೆಳೆ ನೀರಿನಲ್ಲಿ ಜಲಾವೃತ್ತ ಆಗಿ ನಷ್ಟ ಉಂಟಾಗಿದ್ದು ಕಂಡುಬಂತು.

ಗ್ರಾಮಸ್ಥರ ಅಸಮಾಧಾನ: ತಾರಕ ಜಲಾಶಯ ಭರ್ತಿ ಆಗುತ್ತಿದ್ದು, ಜಲಾಶಯದಿಂದ ಯಾವ ಸಂದರ್ಭದಲ್ಲಿ ಆದರೂ ನದಿಗೆ ನೀರು ಬಿಡಲಾಗುತ್ತದೆ ಎಂದು ಪತ್ರಿಕೆ ಹೇಳಿಕೆ ನೀಡಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಗ್ರಾಮೀಣ ಭಾಗಕ್ಕೆ ಪತ್ರಿಕೆಗಳು ಬರುವುದು ಕಡಿಮೆ. ಜತೆಗೆ ಯಾವ ಪತ್ರಿಕೆಯಲ್ಲಿ ಪ್ರಕಟಣೆ ನೀಡಿದ್ದಾರೆ ಎಂಬುದು ಕೂಡ ರೈತರಿಗೆ ಮಾಹಿತಿ ಇಲ್ಲ. ಮುಂಚಿತವಾಗಿ ನೀರಾವರಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಮೂಲಕ ಪ್ರಚಾರ ಪಡಿಸಬಹುದಾಗಿತ್ತು. ಆದರೆ, ಆ ಕೆಲಸವನ್ನು ಅಧಿಕಾರಿಗಳು ಮಾಡಿಲ್ಲ. ರಾತ್ರಿ ವೇಳೆ ಜನರು ಮಲಗಿದ್ದ ಸಂದರ್ಭದಲ್ಲಿ ತಾರಕ ಜಲಾಶಯ ಭರ್ತಿ ಆಗಲು ಮೂರು ಅಡಿ ಬಾಕಿ ಇದ್ದರು ಕೂಡ ಬಾರಿ ಪ್ರಮಾಣದಲ್ಲಿ ನದಿಗೆ ನೀರು ಹರಿಸುವ ಅವಶ್ಯಕತೆ ಇರಲಿಲ್ಲ ಎಂದು ಗ್ರಾಮಸ್ಥರು ಅಸಮಧಾನ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net