ಮೂರು ದಿನ ಹೊಳೆಯಲಿವೆ ಗುರು, ಶುಕ್ರ, ಶನಿ..

Sun
Published on

ಉಡುಪಿ: ಪಶ್ಚಿಮ ಆಕಾಶದಲ್ಲಿ ಶುಕ್ರ ಗ್ರಹ ಮುಸ್ಸಂಜೆ ವಜ್ರದಂತೆ ಹೊಳೆಯುತ್ತ ನಾನೇ ಬೆಳ್ಳಿಚುಕ್ಕಿ ಎನ್ನುವಂತೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಡಿ.5, 6 ಹಾಗೂ 7ರಂದು ಈ ವಿಶೇಷವನ್ನು ವೀಕ್ಷಿಸಬಹುದಾಗಿದ್ದು, ಜತೆಗೆ ಶನಿ ಹಾಗೂ ಗುರು ಗ್ರಹಗಳೂ ಹೊಳೆಯುವುದನ್ನು ಕಾಣಬಹುದು. ಪುನಃ ಪಶ್ಚಿಮ ಆಕಾಶದಲ್ಲಿ ಈ ವಿದ್ಯಮಾನ ನೋಡಬೇಕಿದ್ದರೆ 19 ತಿಂಗಳು (ಸುಮಾರು 584 ದಿನ) ಕಾಯಬೇಕು ಎಂದು ಉಡುಪಿ ಪಿಪಿಸಿ ನಿವೃತ್ತ ಪ್ರಾಂಶುಪಾಲ ಡಾ.ಎ.ಪಿ. ಭಟ್ ತಿಳಿಸಿದ್ದಾರೆ.

ಸುಮಾರು 11 ಕೋಟಿ ಕಿ.ಮೀ. ದೂರದಲ್ಲಿ ದೀರ್ಘ ವೃತ್ತಾಕಾರದಲ್ಲಿ ಸೂರ್ಯನ ಸುತ್ತುವ ಶುಕ್ರ ಗ್ರಹ ಸೂರ್ಯನಿಗೆ ಭೂಮಿಗಿಂತ ಹತ್ತಿರ. ಭೂಮಿ ಸೂರ್ಯನಿಂದ ಸುಮಾರು 15 ಕೋಟಿ ಕಿ.ಮೀ. ದೂರ. ಶುಕ್ರ ಗ್ರಹ 584 ದಿನಗಳಿಗೊಮ್ಮೆ ಭೂಮಿಗೆ ಅತಿ ಸಮೀಪ ಅಂದರೆ ಸುಮಾರು 4 ಕೋಟಿ ಕಿ.ಮೀ. ದೂರಕ್ಕೆ ಬರುತ್ತದೆ. ಮತ್ತೆ 9 ತಿಂಗಳ ನಂತರ ಅತಿ ದೂರ ಸುಮಾರು 26 ಕೋಟಿ ಕಿ.ಮೀ. ದೂರವಿರುತ್ತದೆ. ಇವುಗಳಿಗೆ ಸುಪೀರಿಯರ್ ಕಂಜಂಕ್ಷನ್ ಹಾಗೂ ಇನ್ಪೀರಿಯರ್ ಕಂಜಂಕ್ಷನ್ ಎನ್ನುತ್ತಾರೆ.

ಇನ್ನೂ ಒಂದು ವಿಶೇಷವೆಂದರೆ ಶುಕ್ರನಿಗೆ ಸ್ವಯಂ ಪ್ರಭೆ ಇಲ್ಲ. ಅದು ನಮಗೆ ಕಾಣುವುದು ಸೂರ್ಯನ ಪ್ರತಿಫಲಿಸಿದ ಬೆಳಕಿನಿಂದ. ಹಾಗಾಗಿ ದೂರವಿದ್ದಾಗ ಚಿಕ್ಕದಾಗಿ ಪೂರ್ತಿ ಹೊಳೆದರೆ ಹತ್ತಿರಬಂದಾಗ ದೊಡ್ಡದಾಗಿ ಕಂಡರೂ ಕೆಲವಂಶ ಮಾತ್ರ ಹೊಳೆಯುತ್ತದೆ. ಈ ವಾರ ಶುಕ್ರ ಭೂಮಿಯಿಂದ ಸುಮಾರು 6 ಕೋಟಿ ಕಿ.ಮೀ. ಇದ್ದರೂ ಅಲ್ಲಿಂದ ಪ್ರತಿಫಲಿಸಿದ ಭಾಗ ನಮಗೆ ಕಾಣುವುದು ಶೇ.25 ಅಂಶ ಮಾತ್ರ. ಶುಕ್ರ ಗ್ರಹ ರಾತ್ರಿ ಇಡೀ ಕಾಣುವುದಿಲ್ಲ. ಸಾಯಂಕಾಲ ಪಶ್ಚಿಮ ಆಕಾಶದಲ್ಲಿ ಎರಡೂವರೆ ಗಂಟೆ ಕಾಲ ಹಾಗೂ ಬೆಳಗಿನ ಸೂರ್ಯೋದಯಕ್ಕೆ ಮೊದಲು ಪೂರ್ವ ಆಕಾಶದಲ್ಲಿ ಗೋಚರಿಸುತ್ತದೆ. ಈಗ ಪಶ್ಚಿಮ ಆಕಾಶದಲ್ಲಿ ಸಾಯಂಕಾಲ ಕಾಣುವ ಶುಕ್ರ 2022 ಫೆಬ್ರವರಿಯಿಂದ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಕಾಣುತ್ತದೆ. ದೂರದರ್ಶಕದಲ್ಲಿ ಶುಕ್ರ ನೊಡಲು ಈ ಸಮಯ ಬಹಳ ಪ್ರಶಸ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net