ಪೊಲೀಸರಾಗಲು ಅಡ್ಡ ದಾರಿ ಹಿಡಿದಿದ್ದ ಮೂವರ ವಿರುದ್ಧ ದೂರು ದಾಖಲು!

R. SRINIVAS GOWDA
Published on

ಹಾಸನ: ಕೆಎಸ್‌ಆರ್‌ಪಿ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದಡಿ ಬಡಾವಣೆ ಠಾಣೆಯಲ್ಲಿ 2 ಹಾಗೂ ಶಾಂತಿಗ್ರಾಮದಲ್ಲಿ 1 ಸೇರಿ ಮೂರು ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಜ. 29 ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದ್ದ ದೈಹಿಕ ಪರೀಕ್ಷೆಗೆ ಬೇರೆ ವ್ಯಕ್ತಿಯನ್ನು ಕಳಿಸಿ ಮಾ. 4ರಂದು ನಡೆದ ದಾಖಲಾತಿ ಪರಿಶೀಲನೆಗೆ ಬಂದಿದ್ದ ಗೋಕಾಕ ತಾಲೂಕಿನ ಅಭ್ಯರ್ಥಿ ಗೋಪಾಲ್ ಕಳ್ಳಿಗುದ್ದಿ ಹಾಗೂ ಹಾಲ್ ಟಿಕೆಟ್‌ಗೆ ಬೇರೆ ಫೋಟೊ ಅಂಟಿಸಿದ್ದ ಯುವಕನ ವಿರುದ್ಧ ದೂರು ದಾಖಲಾಗಿದೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದರು.

ಚಿನ್ನಾಭರಣ ಪಾಲಿಷ್, ಕಡಿಮೆ ಬೆಲೆಗೆ ಚಿನ್ನದ ವಸ್ತುಗಳ ಮಾರಾಟದ ಹೆಸರಿನಲ್ಲಿ ಬರುವವರನ್ನು ಮನೆ ಹತ್ತಿರಕ್ಕೆ ಬಿಟ್ಟುಕೊಳ್ಳಬಾರದು ಎಂದು ಎಸ್ಪಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಅರಸೀಕೆರೆ, ಅರಕಲಗೂಡು ಭಾಗದಲ್ಲಿ ಈ ರೀತಿಯ ಪ್ರಕರಣ ಹೆಚ್ಚುತ್ತಿದ್ದು ಜಾಗರೂಕತೆಯಿಂದ ಇರಬೇಕು. ಅರಕಲಗೂಡು ತಾಲೂಕು ಸರಗೂರು ಗ್ರಾಮದ ವ್ಯಕ್ತಿಯೊಬ್ಬರಿಗೆ ನಕಲಿ ಚಿನ್ನ ಕೊಟ್ಟು 4 ಲಕ್ಷ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ ವಿಚಾರಣೆ ನಡೆಯುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net