

ಪಡುಬಿದ್ರಿ: ಕಾಪು ಪೇಟೆಯಲ್ಲಿ ಸಾರ್ವಜನಿಕ ಶಾಂತಿ ಭಂಗ ಮಾಡಿದ ಆರೋಪದಲ್ಲಿ ಖಾಸಗಿ ಬಸ್ ಚಾಲಕ ನಿಜಾಮುದ್ದೀನ್ ಹಾಗೂ ಬಸ್ಸಿನ ನಿರ್ವಾಹಕ ಶೇಖ್ ಅಹಮ್ಮದ್ ಮತ್ತು ಟೈಮ್ ಕೀಪರ್ ಚೇತನ್ ಎಂಬುವರನ್ನು ವಶಕ್ಕೆ ಪಡೆದ ಕಾಪು ಠಾಣಾ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬುಧವಾರ ಸಂಜೆ ಬಸ್ ಚಾಲಕ ನಿಜಾಮುದ್ದೀನ್ ಬಸ್ಸನ್ನು ರಸ್ತೆ ಮಧ್ಯೆ ನಿಲ್ಲಿಸಿ ಅದರ ನಿರ್ವಾಹಕ ಮತ್ತು ಟೈಮ್‌ಕೀಪರ್ ರಸ್ತೆಯಲ್ಲಿ ಪರಸ್ಪರ ನಿಂದಿಸಿ ಜಗಳವಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬರುವ ವೇಳೆ ಅವರೆಲ್ಲ ಅಲ್ಲಿಂದ ತೆರಳಿದ್ದರು. ಈ ವೇಳೆ ಸಾರ್ವಜನಿಕರು ಚಿತ್ರೀಕರಣ ಮಾಡಿದ ವಿಡಿಯೋ ಆಧರಿಸಿ ಪೊಲೀಸರು 3 ಜನ ಆರೋಪಿಗಳನ್ನು ಗುರುವಾರ ವಶಕ್ಕೆ ಪಡೆದಿದ್ದಾರೆ.