

ತುಮಕೂರು: ರಾಜ್ಯಪಾಲರಿಗೆ ಬೆದರಿಕೆ ಇದೆ ಎಂಬುದರ ಕುರಿತು ನನಗಾಗಲಿ ಅಥವಾ ಪೊಲೀಸ್ ಮಹಾನಿರ್ದೇಶಕರ ಗಮನಕ್ಕಾಗಲಿ ಬಂದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.
ನಗರದ ಅಮಾನಿಕೆರೆಗೆ ಬಾಗಿನಿ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರಿಗೆ ಬುಲೆಟ್ ಪ್ರ್ೂ ಕಾರು ಕೊಟ್ಟಿರುವ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ರಾಷ್ಟ್ರಪತಿಗಳು, ಪ್ರಧಾನಿ, ರಾಜ್ಯಪಾಲರು, ಕೇಂದ್ರ ಗೃಹಸಚಿವರಿಗೆ ಭದ್ರತೆಯನ್ನು ಕೇಂದ್ರದ ಭದ್ರತಾ ವ್ಯವಸ್ಥೆ ಪ್ರಕಾರ ನೀಡಿರಬಹುದು ಎಂದರು.
ನಮ್ಮ ಸರ್ಕಾರ, ನಮ್ಮ ಪಕ್ಷ ಯಾರೂ ದ್ವೇಷ ರಾಜಕಾರಣ ಮಾಡುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಮಾಡಿದ್ದೇವೆ ಹೊರತು ಅದನ್ನು ಮೀರಿ ಏನನ್ನು ಮಾಡಿಲ್ಲ. ರಾಜ್ಯಪಾಲರ ಕಚೇರಿಯನ್ನು ಬಿಜೆಪಿಯವರು ದುರಪಯೋಗಪಡಿಸಿಕೊಂಡಿದ್ದಾರೆ ಎಂಬುದು ನಮ್ಮ ಆರೋಪವಾಗಿದೆ. ಹಾಗೇನದರೂ ಮಾಡಿದ್ದರೆ 25ಕ್ಕು ಹೆಚ್ಚು ಹಗರಣ ಹಿಂದಿನ ಸರ್ಕಾರದಲ್ಲಿ ನಡೆದಿದ್ದು ಕಾನೂನಿನಡಿಯಷ್ಟೇ ಅದರ ವಿಚಾರಣೆ ನಡೆಸುತ್ತಿದ್ದೇವೆ.ಎಂದು ಸಮರ್ಥಿಸಿಕೊಂಡರು.
ಜಂತಕಲ್ ಮೈನಿಂಗ್ ವಿಚಾರದಲ್ಲಿ ತಮ್ಮ ಸಹಿ ನಕಲು ಮಾಡಲಾಗಿದೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪರಂ, ಸಹಿ ಫೋರ್ಜರಿಯಾಗಿದೆ ಎಂಬುದರ ಕುರಿತು ಕುಮಾರಸ್ವಾವಿ ಅವರು ದೂರು ಕೊಟ್ಟರೆ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ. ನಮ್ಮಲ್ಲಿ ಇದನ್ನೆಲ್ಲಾ ಪತ್ತೆಹಚ್ಚಲು ಅತ್ಯಾಧುನಿಕ ವ್ಯವಸ್ಥೆ ಇದೆ ಎಂದರು.
ಹೆಚ್ ಡಿ ಕುಮಾರಸ್ವಾಮಿ ಅವರನ್ನು ಬಂಧಿಸುತ್ತೇವೆ ಎಂಬ ಸಿಎಂ ಹೇಳಿಕೆ ವಿಚಾರ ಕುರಿತು ಕಾನೂನಿಗಿಂತ ಯಾರು ದೊಡ್ಡವರಿಲ್ಲ. ಕಾನೂನಿಗೆ ಗೌರವ ಕೊಡುತ್ತಿರುವುದರಿಂದಲೇ ಇನ್ನು ನಾವೆಲ್ಲ ಇದ್ದೇವೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾನೂನಿಗೆ ಗೌರವ ನೀಡಬೇಕು ಎಂದರು.