

ಹಾಸನ: ಒಂದು ಧರ್ಮ ಅಥವಾ ಶಿಸ್ತನ್ನು ಇಷ್ಟಪಡುವವರೇ ದೇಶ ಭಕ್ತರು. ಆರ್‌ಎಸ್‌ಎಸ್ ವಿರೋಧಿಸುವವರು ದೇಶವನ್ನು ಇಷ್ಟಪಡದವರು ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.
ಶನಿವಾರ ಹಾಸನಾಂಬೆ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಪಿಡಿಒ ಅಮಾನತು ಮಾಡಿರುವುದನ್ನು ಖಂಡಿಸಿದರು. ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡುವುದಿಲ್ಲ. ನಾನು ಅವರ ತಂದೆ ಬಗ್ಗೆ ಏನೂ ಹೇಳುತ್ತಿಲ್ಲ. ಆದರೆ ಪ್ರಿಯಾಂಕ್ ಖರ್ಗೆ ಅವರು ನೀಡಿದ ಹೇಳಿಕೆಗಳು ಖಂಡನೀಯ ಎಂದರು.
ಆರ್‌ಎಸ್‌ಎಸ್ ಈ ದೇಶಕ್ಕೆ ಏನು ಕೆಟ್ಟದ್ದು ಮಾಡಿದೆ ? ಒಂದು ತಪ್ಪಾದರೂ ಹೇಳಲಿ. ದೇಶವನ್ನು ಪ್ರೀತಿಸುವವರು ಯಾರೂ ಆರ್‌ಎಸ್‌ಎಸ್ ವಿರೋಧ ಮಾಡುವುದಿಲ್ಲ. ಈ ಸಂಘಟನೆ ದೇಶಪ್ರೇಮ, ಶಿಸ್ತಿನ ಹಾಗೂ ಸಮಾಜ ಸೇವೆಯ ಪರವಾಗಿದೆ ಎಂದರು.
ಪಿಡಿಒ ಅಮಾನತು ಮಾಡಲಾಗಿದೆ. ಅವರು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರಾ? ಅವರು ಏನು ತಪ್ಪು ಮಾಡಿದ್ದಾರೆ ಎಂದು ಅಮಾನತು ಮಾಡಲಾಗಿದೆ ಎಂದು ಪ್ರಶ್ನಿಸಿದರು.