

ಹಾಸನ: ಜಿಲ್ಲಾ ಪಂಚಾಯಿತಿ ವಸತಿ ಯೋಜನೆ ನೋಡಲ್ ಅಧಿಕಾರಿ ಎಂ.ಕೆ.ರಾಜೇಶ್ ಹಣದಾಹಕ್ಕೆ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿರುವುದು ಮಾತ್ರವಲ್ಲದೆ ಅರಿವಿಲ್ಲದೆ ಮನೆ ಕಟ್ಟಿಕೊಳ್ಳಲು ಮುಂದಾಗಿದ್ದ ನೂರಾರು ಜನರು ಸಂಕಷ್ಟ ಎದುರಿಸುವಂತಾಗಿದೆ.
15 ವರ್ಷಗಳಿಂದ ಮನೆ ಇಲ್ಲದೆ ಜೋಪಡಿಗಳಲ್ಲಿ ವಾಸಿಸುತ್ತಿದ್ದ ಬಡ ಕುಟುಂಬಗಳಿಗೆ ಕೊನೆಗೂ ಸರ್ಕಾರದಿಂದ ಮನೆ ಸಿಗುತ್ತಿದೆ ಎಂಬ ಸುದ್ದಿ ತಿಳಿದಾಗ ಅವರೆಲ್ಲರೂ ಸಂತೋಷಗೊಂಡಿದ್ದರು. ಆದರೆ ರಾಜೇಶ್ ಎಂಬಾತನ ಮೋಸ ಅರಿಯದೆ ದಾಖಲಾತಿಗಳನ್ನು ಕೊಟ್ಟು ಸರ್ಕಾರದ ಅನುದಾನ ಪಡೆದಿದ್ದರು.
ಈಗ ನೀವು ಕಾನೂನುಬಾಹಿರವಾಗಿ ಮನೆ ಕಟ್ಟಿಕೊಂಡಿದ್ದು ಹಣ ವಾಪಸ್ ಕಟ್ಟಿ ಎಂದು ಪೊಲೀಸ್ ಇಲಾಖೆಯಿಂದ ನೋಟಿಸ್ ಬಂದಿದೆ. ವಸತಿ ಯೋಜನೆಯಲ್ಲಿ ಅಕ್ರಮವಾಗಿದೆ ಎಂದು ಬಾಣವರ ಪಿಡಿಒ ಹಾಗೂ ನೋಡಲ್ ಅಧಿಕಾರಿ ವಿರುದ್ಧ ಅರಸೀಕೆರೆ ಇಒ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಹಣ ವಾಪಸ್ ನೀಡುವಂತೆ ಫಲಾನುಭವಿಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಇದರಿಂದ ಗಾಬರಿಯಾಗಿರುವ ಫಲಾನುಭವಿಗಳು ಅಡಕತ್ತರಿಗೆ ಸಿಲುಕಿದಂತಾಗಿದೆ. ರಾಜೇಶನ ಅಕ್ರಮಕ್ಕೆ ನೂರಾರು ಕುಟುಂಬಗಳು ಕಣ್ಣೀರು ಹಾಕುತ್ತಿವೆ.
ಜಿಲ್ಲಾ ಪಂಚಾಯಿತಿ ವಸತಿ ಯೋಜನೆ ನೋಡಲ್ ಅಧಿಕಾರಿಯಾಗಿದ್ದ ರಾಜೇಶ್ ಹಣದಾಸೆಗೆ ಬಡವರ ಜೀವದೊಂದಿಗೆ ಚೆಲ್ಲಾಟವಾಡಿದ್ದಾನೆ. ವಸತಿ ಯೋಜನೆ ಲಾಗಿನ್ ತನ್ನ ಬಳಿಯೇ ಇದ್ದುದ್ದರಿಂದ ಬೇಕಾಬಿಟ್ಟಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾನೆ. 2018ರಿಂದ 23ರ ಅವಧಿಯಲ್ಲಿ ಸಕಲೇಶಪುರ ತಾಲೂಕಿಗೆ ವಿವಿಧ ವಸತಿ ಯೋಜನೆಯಡಿ ಹೆಚ್ಚುವರಿ ಮನೆಗಳು ಮಂಜೂರಾಗಿದ್ದು ಅಗತ್ಯ ದಾಖಲಾತಿಗಳನ್ನು ಕೊಟ್ಟರೆ ನಿಮಗೆ ಮನೆ ನಿರ್ಮಿಸಿಕೊಡುತ್ತೇನೆಂದು ನಂಬಿಸಿದ್ದ. ಹತ್ತಾರು ವರ್ಷಗಳಿಂದ ಗುಡಿಸಲಿನಲ್ಲೇ ಇದ್ದ ಸಾರ್ವಜನಿಕರು ಆತನ ಮಾತು ನಂಬಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ನಿವೇಶನ ದಾಖಲಾತಿಗಳನ್ನು ಕೊಟ್ಟು ಈಗ ಪೇಚಿಗೆ ಸಿಲುಕಿದ್ದಾರೆ.
ಸಕಲೇಶಪುರದ ನಿವಾಸಿಗಳು ಎಂದು ದಾಖಲಾತಿ ಸೃಷ್ಟಿಸಿರುವ ರಾಜೇಶ್ ಅದನ್ನು ಹಾಸನ ತಾಲೂಕಿನ ಅಂಕಪುರ, ಸತ್ತಿಗರಹಳ್ಳಿ ಹೀಗೆ ಸುತ್ತಲಿನ ಹಳ್ಳಿಯ ನಿವಾಸಿಗಳಿಗೆ ಮಾಡಿಕೊಟ್ಟಿದ್ದಾನೆ. ಲಾಗಿನ್ ಅಧಿಕಾರ ತನ್ನ ಸುಪರ್ದಿಯಲ್ಲೇ ಇದ್ದುದ್ದರಿಂದ ಯಾರಿಗೂ ಗೊತ್ತಾಗದಂತೆ ಕೃತ್ಯ ಎಸಗಿದ್ದಾನೆ. ಮನೆ ಕಟ್ಟಿಕೊಡಲು ಸಹಾಯಧನ ಬಂದಿದೆ ಎಂದು ದಾಖಲೆಗಳನ್ನು ಪಡೆದು ಮೊದಲ ಕಂತಿನ 30 ಸಾವಿರ ರೂ. ಮತ್ತು 2ನೇ ಕಂತಿನ 60 ಸಾವಿರ ರೂ. ಬಿಡುಗಡೆ ಮಾಡಿ ಫಲಾನುಭವಿಗಳಿಂದ 2 ಕಂತಿನಿಂದ ತಲಾ 16 ಸಾವಿರ ರೂ. ಪಡೆದಿದ್ದಾನೆ. ಈ ರೀತಿ 219 ಜನರಿಗೆ ಟೋಪಿ ಹಾಕಿದ್ದಾನೆ.
ಅರ್ಧಕ್ಕೆ ನಿಂತಿರುವ ಕಾಮಗಾರಿ: ಸರ್ಕಾರ ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡುತ್ತದೆ. ನಾವು ಸಹ ಅದೇ ರೀತಿ ಫಲಾನುಭವಿಗಳೆಂದು ತಿಳಿದ ಅನೇಕರು ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತಿದ್ದಂತೆ ಇಟ್ಟಿಗೆ, ಸಿಮೆಂಟ್, ಕಬ್ಬಿಣ ಖರೀದಿ ಹಣ ಖರ್ಚು ಮಾಡಿದ್ದಾರೆ. ಶಾಶ್ವತ ಸೂರು ಕಟ್ಟಿಕೊಳ್ಳಲು ಮನೆ ಅಂಗಳದಲ್ಲಿ ಕಟ್ಟಡ ಸಾಮಾನು ಇಟ್ಟುಕೊಂಡಿದ್ದ ಜನರೀಗ ಕಣ್ಣೀರು ಸುರಿಸುವಂತಾಗಿದೆ. ಇದೀಗ ಪೊಲೀಸರು ಮನೆ ಬಾಗಿಲಿಗೆ ಬಂದು ನೀವು ಪಡೆದ ಹಣವನ್ನು ಹಿಂದಿರುಗಿಸಬೇಕೆಂದು ನೋಟಿಸ್ ನೀಡುತ್ತಿರುವುದು ಗ್ರಾಮಸ್ಥರ ಕಣ್ಣೀರು ಹೆಚ್ಚಿಸಿದೆ.
ಬ್ಯಾಂಕ್ ಖಾತೆಗಳು ಬಂದ್: ಫಲಾನುಭವಿಗಳ ಬ್ಯಾಂಕ್ ಖಾತೆಯನ್ನು ಅಧಿಕಾರಿಗಳು ನಿರ್ಬಂಧಿಸಿದ್ದಾರೆ. ಅದರಿಂದ ಬಡಜನರು ಪ್ರತಿದಿನ ಬದುಕಿಗಾಗಿ ಅವಲಂಬಿಸಿದ್ದ ವೃದ್ಧಾಪ್ಯ ವೇತನ, ಗೃಹಲಕ್ಷ್ಮಿ ಯೋಜನೆಯ ಹಣ, ಡೇರಿಗೆ ಹಾಕಿರುವ ಹಾಲಿನ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ಏಕಾಏಕಿ ಬ್ಯಾಂಕ್ ಖಾತೆ ಫ್ರೀಜ್ ಆಗಿರುವುದರಿಂದ ಆತಂಕಕ್ಕೆ ಸಿಲುಕಿದ್ದಾರೆ. ನಾವು ಮೋಸ ಮಾಡಿಲ್ಲ. ನಮಗೆ ಬಂದ ಹಣವನ್ನು ಮನೆ ಕಟ್ಟಲು ಬಳಸಿದ್ದೇವೆ. ಆದರೆ ಅಧಿಕಾರಿಗಳು ನಮ್ಮ ಖಾತೆಗಳನ್ನು ತಡೆದು ಬದುಕಿನ ಜತೆ ಆಟವಾಡುತ್ತಿದ್ದಾರೆ. ಈ ರೀತಿ ಹಿಂಸೆ ನೀಡಿದರೆ ಬದುಕುವುದು ಹೇಗೆ ಎಂದು ಅವಲತ್ತುಕೊಂಡಿದ್ದಾರೆ.
ಯಾರದೋ ತಪ್ಪು ಮತ್ಯಾರಿಗೋ ಶಿಕ್ಷೆ: ಮೊದಲ ಮತ್ತು ಎರಡನೇ ಕಂತಿನ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿದಾಗ ಅಧಿಕಾರಿಗಳ ಸಹಿ ಮೋಹರುಗಳಿಲ್ಲದೆ ಅದು ಹೇಗೆ ಸಾಧ್ಯವಾಯಿತು. ಜನರಿಂದ ಹಣ ತೆಗೆಯುವ ಮೂಲಕ ಮೋಸ ಮಾಡಿದ ವ್ಯಕ್ತಿ ಹೊರಗೆ ಸುಖವಾಗಿ ತಿರುಗುತ್ತಿದ್ದರೆ, ಬಡವರಿಗೆ ಪೊಲೀಸರು ನೋಟಿಸ್ ನೀಡುತ್ತಿರುವುದು ಯಾವ ನ್ಯಾಯ. ಇದು ಬಡವರ ಮೇಲಿನ ಅನ್ಯಾಯವಷ್ಟೇ ಅಲ್ಲ, ಸರ್ಕಾರದ ನಿರ್ಲಕ್ಷ್ಯವೂ ಆಗಿದೆ.