ಈ ಬಾರಿಯೂ ರಾಜ್ಯದಲ್ಲಿ ಸಾವಿರ ಮಿಮೀ ಮಳೆ:ಕರಾವಳಿಯಲ್ಲಿ ಅಧಿಕ ವರ್ಷಧಾರೆ?

mansoon rain
Published on

ಬೆಂಗಳೂರು: ನೈಋತ್ಯ ಮಾನ್ಸೂನ್​ (ಮುಂಗಾರು) ಆಶಾದಾಯಕವಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ರಾಜ್ಯಾದ್ಯಂತ ಸಾವಿರ ಮಿಮೀ ಅಧಿಕ ಮಳೆ ಬೀಳಲಿದ್ದು,ಕೃಷಿ ಚಟುವಟಿಕೆಗಳಿಗೆ ವರದಾನವಾಗಿದೆ.

ಜೂ.1ರಿಂದ ಸೆ.30ರವರೆಗೆ ವಾಡಿಕೆಯಂತೆ 852 ಮಿಮೀ ಮಳೆಯಾಗಬೇಕು. ಮುಂಗಾರು ಅವಧಿ ಚೆನ್ನಾಗಿದ್ದರೆ ಮಾತ್ರ ಉತ್ತಮ ಮಳೆಯಾಗುತ್ತದೆ. ಇಲ್ಲದಿದ್ದರೆ,ವಾಡಿಕೆಗಿಂತ ಕಡಿಮೆ ಸುರಿಯಲಿದೆ. ಪ್ರತಿ ವರ್ಷ"ಎಲ್​ ನಿನೋ ಮತ್ತು ಲಾ&ನಿನಾ ಪರಿಸ್ಥಿತಿ ಮೇರೆಗೆ ಮುಂಗಾರು ಮಳೆ ಮೇಲೆ ಪರಿಣಾಮ ಬೀರುತ್ತದೆ. ಸಮುದ್ರದ ಪೂರ್ವ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ 1 ಡಿ.ಸೆ.ನಿಂದ 1.5 ಡಿ.ಸೆ.ವರೆಗೆ ಹೆಚ್ಚು ದಾಖಲಾದರೆ "ಎಲ್​ ನಿನೋ' ಉಂಟಾಗುತ್ತದೆ. ಫೆಸಿಫಿಕ್​ ಸಮುದ್ರದ ಪಶ್ಚಿಮ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ ಹೆಚ್ಚು ಇದ್ದರೆ "ಲಾ&ನಿನಾ' ಎಂದು ಕರೆಯಲಾಗುತ್ತಿದೆ. 2023-24ರಲ್ಲಿ "ಎಲ್​ ನಿನೋ' ಪ್ರಭಾವವು ಮುಂಗಾರು ಮೇಲೆ ಪರಿಣಾಮ ಬೀರಿತ್ತು. ಇದರಿಂದ ರಾಜ್ಯದಲ್ಲಿ ತೀವ್ರ ಮಳೆ ಕುಂಠಿತವಾಗಿ ಬರಗಾಲ ಉಂಟಾಗಿತ್ತು.

ಕಳೆದ ವರ್ಷ "ಲಾ-ನಿನಾ' ಪರಿಣಾಮದಿಂದ ಉತ್ತಮ ಮಳೆಯಾಗಿತ್ತು. ಈ ಬಾರಿಯೂ ಫೆಸಿಫಿಕ್​ ಮತ್ತು ಹಿಂದು ಮಹಾಸಾಗರದಲ್ಲಿ "ಲಾ-ನಿನಾ' ತಟಸ್ಥವಾಗಿದೆ. ಹಿಂದು ಮಹಸಾಗರದ ದ್ವಿಧ್ರುವಿ (ಐಒಸಿ) ಪರಿಸ್ಥಿತಿಯೂ ತಟಸ್ಥವಾಗಿದೆ. ಈ ಎಲ್ಲ ಕಾರಣಗಳಿಂದ ರಾಜ್ಯದಲ್ಲಿ 2025ರ ಜೂನ್​ನಿಂದ ಮುಂದಿನ 4 ತಿಂಗಳು ವಾಡಿಕೆ ಅಥವಾ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಈಗಾಗಲೇ ಮುನ್ಸೂಚನೆ ಕೊಟ್ಟಿದೆ. ರಾಜ್ಯದಲ್ಲಿ ಯಾವಾಗ ಮುಂಗಾರು ಮಾರುತಗಳು ಆಗಮಿಸುವ ಬಗ್ಗೆ ಮೇ ಕೊನೆಯ ವಾರದಲ್ಲಿ ನಿಖರ ಮಾಹಿತಿ ದೊರೆಯಲಿದೆ.

ಕರಾವಳಿಯಲ್ಲಿ 3,101 ಮಿಮೀ ಹೆಚ್ಚು: ರಾಜ್ಯದ ಇತರೆ ಭಾಗಗಳಗಿಂತ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ವ್ಯಾಪ್ತಿಯ ಕರಾವಳಿಯಲ್ಲಿ ವಾಡಿಕೆಗಿಂತ 3,101 ಮಿಮೀ ಅಧಿಕವಾಗಿ ಸುರಿಯಲಿದೆ. ಮಲೆನಾಡು ವ್ಯಾಪ್ತಿಯ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಒಟ್ಟು 1,556 ಮಿಮೀ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಕೋಲಾರ, ಮಂಡ್ಯ ಸೇರಿ ದಕ್ಷಿಣ ಕರ್ನಾಟಕದಲ್ಲಿ ಒಟ್ಟು 369 ಮಿಮೀ ಸುರಿಯಲಿದೆ. ಬೆಳಗಾವಿ, ಬೀದರ್​, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ ಮತ್ತು ರಾಯಚೂರು ಸೇರಿ ಒಟ್ಟು ಉತ್ತರ ಕರ್ನಾಟಕ ಭಾಗದಲ್ಲಿ ಒಟ್ಟು 479 ಮಿಮೀ ಮಿಮೀಗೂ ಅಧಿಕ ವರ್ಷಧಾರೆಯಾಗಲಿದೆ.

82.48 ಲಕ್ಷ ಹೆಕ್ಟೇರ್​ ಪ್ರದೇಶಗಳಲ್ಲಿ ಗುರಿ:ಮುಂಗಾರು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ರಾಜ್ಯದಲ್ಲಿ 82.48 ಲಕ್ಷ ಹೆಕ್ಟೇರ್​ಗಿಂತ ಅಧಿಕ ಪ್ರದೇಶಗಳಲ್ಲಿ ಬಿತ್ತನೆಯಾಗುವ ಗುರಿ ಇದೆ. ಕಳೆದ ವರ್ಷವೂ ಒಳ್ಳೆಯ ಮಳೆಯಾಗಿದ್ದ ಕಾರಣ 82 ಲಕ್ಷ ಹೆಕ್ಟೇರ್​ ಪ್ರದೇಶಗಳಲ್ಲಿ ಬಿತ್ತನೆಯಾಗಿತ್ತು. 23.99 ಲಕ್ಷ ಹೆಕ್ಟೇರ್​ ನೀರಾವರಿ ಪ್ರದೇಶಗಳಾದರೆ, 58.49 ಲಕ್ಷ ಹೆಕ್ಟೇರ್​ ಪ್ರದೇಶಗಳು ಮಳೆ ಅವಲಂಬಿಸಿವೆ. ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಗೋಧಿ, ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂಧೆ, ಅವರೆ, ಮಟಕಿ, ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳಿ, ಹಿಚ್ಚೆಳ್ಳು, ಸೋಯಾ ಅವರೆ, ಅಗಸೆ, ಹತ್ತಿ, ಕಬ್ಬು ಮತ್ತು ತಂಬಾಕು ಸೇರಿ ಏಕಧಾನ್ಯ, ದ್ವಿದಳ ಧಾನ್ಯ, ಎಣ್ಣೆ ಕಾಳುಗಳು ಮತ್ತು ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತದೆ.

ರಾಜ್ಯದಲ್ಲಿ ಮುಂಗಾರು ಅವಧಿ ಮಳೆ ವಿವರ

ವರ್ಷ                       ಮಿಮೀ

2024                     978

2023                     642

2022                     1019

2021                      787

2020                       991

ಮುಂಗಾರು ಅವಧಿಯಲ್ಲಿ ದೇಶದಲ್ಲಿ ವಾಡಿಕೆ ಅಥವಾ ವಾಡಿಕೆಗಿಂತ ಅಧಿಕ ವರ್ಷಧಾರೆಯಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿಯೂ ಕಳೆದ ವರ್ಷದಂತೆ ಈ ವರ್ಷವೂ ಉತ್ತಮ ಮಳೆ ಸುರಿಯಲಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿ ರೈತರಿಗೆ ವರದಾನವಾಗಲಿದೆ.

| ಡಾ.ಶ್ರೀನಿವಾಸರೆಡ್ಡಿ. ಹಿರಿಯ ಹವಾಮಾನ ತಜ್ಞ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net