ರಾಜಧಾನಿಯಲ್ಲಿ ವಾಡಿಕೆಗಿಂತ ಅಧಿಕ ಮಳೆ: ಗುಡುಗು, ಮಿಂಚು ಆರ್ಭಟವೂ ಜೋರು

rain
Published on

ಬೆಂಗಳೂರು: ರಾಜಧಾನಿಯಲ್ಲಿ ಈ ಬಾರಿ ವಾಡಿಕೆಗಿಂತ ಅಧಿಕವಾಗಿ ಪೂರ್ವ ಮುಂಗಾರು ಮಳೆಯಾಗಿದೆ. ಮಾ. 1ರಿಂದ ಮೇ 3ರವರೆಗೆ 60 ಮಿಮೀ ಬದಲಾಗಿ 98 ಮಿಮೀ ಮಳೆ ಸುರಿದಿದ್ದು, ಶೇ.63 ವಾಡಿಕೆಗಿಂತ ಹೆಚ್ಚಾಗಿದೆ.

2024ರ ಮಾ.1ರಿಂದ ಮೇ 31ರವರೆಗೆ 156 ಮಿಮೀ ಬದಲಾಗಿ 151 ಮಿಮೀ ಸುರಿದಿದ್ದು, ವಾಡಿಕೆಯಷ್ಟೇ ಬಿದ್ದಿದೆ. 2023ರ ಮಾ.1ರಿಂದ ಮೇ 31ರವರೆಗೆ 156 ಮಿಮೀ ಮಳೆ ಬದಲಾಗಿ 209 ಮಿಮೀ ಸುರಿದಿತ್ತು. ಈ ಬಾರಿ ಪೂರ್ವ ಮುಂಗಾರು ಮುಗಿಯಲು 27 ದಿನ ಬಾಕಿ ಇದೆ. ಈ ಅವಧಿಯಲ್ಲಿ ನಗರದಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆ ಇದೆ.

ಕೆಂಗೇರಿ, ಉತ್ತರಹಳ್ಳಿ, ಬೇಗೂರು, ಯಶವಂತಪುರ,ಮೆಜೆಸ್ಟಿಕ್​, ಕೃಷ್ಣರಾಜೇಂದ್ರ ಮಾರುಕಟ್ಟೆ, ಚಾಮರಾಜಪೇಟೆ, ಕಾಪೋರ್ರೇಷನ್​, ಮೈಸೂರು ರಸ್ತೆ, ಬಸವನಗುಡಿ, ಆರ್​.ಟಿ. ನಗರ, ಸಹಕಾರನಗರ, ಜಯನಗರ, ಮಲ್ಲೇಶ್ವರ, ಯಶವಂತಪುರ, ಮೈಸೂರು ರಸ್ತೆ, ಜಾಲಹಳ್ಳಿ ಕ್ರಾಸ್​, ಹೆಬ್ಬಾಳ ರಸ್ತೆ, ಯಲಹಂಕ, ಕೆ.ಆರ್​.ಪುರ, ಬಾಗಲಗುಂಟೆ, ಪೀಣ್ಯ ಕೈಗಾರಿಕಾ ಪ್ರದೇಶ , ನಾಯಂಡಹಳ್ಳಿ, ಶೆಟ್ಟಿಹಳ್ಳಿ, ಹಂಪಿನಗರ, ದೊಡ್ಡಬಿದರಕಲ್ಲು, ರಾಜರಾಜೇಶ್ವರಿನಗರ, ಜಕ್ಕೂರು , ಹೆಮ್ಮಿಗೆಪುರ, ಹೆರೋಹಳ್ಳಿ, ಕೊಟ್ಟಿಗೆಪಾಳ್ಯ, ನಂದಿನಿ ಲೇಔಟ್​, ಚೊಕ್ಕಸಂದ್ರ, ವಿದ್ಯಾಪಿಠ, ಕಾಟನ್​ಪೇಟೆ ಮತ್ತು ನಾಗಪುರದಲ್ಲಿ ಉತ್ತಮ ಮಳೆಯಾಗಿದೆ.

ಮಳೆಗಿಂತ ಗುಡುಗು, ಮಿಂಚು ಜೋರು: ಈ ಬಾರಿ ಪೂರ್ವ ಮುಂಗಾರು ಅವಧಿಯಲ್ಲಿ ಮಳೆಗಿಂತ ಬಿರುಗಾಳಿ, ಸಿಡಿಲು, ಗುಡುಗು&ಮಿಂಚಿನ ಆರ್ಭಟ ಜೋರಾಗಿದೆ. ಮಳೆ ಆರ್ಭಟಕ್ಕೆ ನಗರಾದ್ಯಂತ 100ಕ್ಕೂ ಅಧಿಕ ಬೃಹತ್​ ಮರ, 300ಕ್ಕೂ ಹೆಚ್ಚು ರೊಂಬೆ&ಕೊಂಬೆಗಳು ಮುರಿದು ಬಿದ್ದಿವೆ. ಹತ್ತಾರು ವಾಹನಗಳ ಜಖಂಗೊಂಡಿದ್ದವು. ನೂರಾರು ವಿದ್ಯುತ್​ ಕಂಬಗಳಿಗೆ ಹಾನಿಯಾಗಿತ್ತು. ಕೆಲ ಸಂದರ್ಭದಲ್ಲಿ ಸಣ್ಣ ಮಳೆಗೆ ಅನಾಹುತ ಉಂಟಾಗಿತ್ತು. ಮನೆಗಳ ಮುಂದೆ ನಿಲ್ಲಿಸಿದ್ದ ಕಾರು, ಬೈಕ್​, ಆಟೋ ರಿಾಗಳಿಗೂ ಹಾನಿಗೀಡಾಗುತ್ತಿವೆ. ಮುಂಗಾರು ಮುನ್ನ ಒಣಗಿದ, ಬೀಳುವ ಹಂತದಲ್ಲಿರುವ ಮರಗಳನ್ನು ಗುರುತಿಸಿ ಅವುಗಳನ್ನು ತೆರವು ಮಾಡುವಲ್ಲಿ ನಿರ್ಲಕ್ಷ್ಯವಹಿಸಿದೆ. ಕೆಲ ವರ್ಷದಿಂದೀಚಿಗೆ ಈ ವಿಭಾಗದ ಅಧಿಕಾರಿಗಳು ನಾಗರಿಕರ ದೂರುಗಳಿಗೆ ಸ್ಪಂದಿಸುತ್ತಿಲ್ಲ. ಹಿರಿಯ ಅಧಿಕಾರಿಗಳು ಸೂಚಿಸಿದರೂ ನಿಯಮದ ನೆಪಮಾಡಿ ಶಿಥಿಲ ಮರಗಳನ್ನು ತೆರವು ಮಾಡುತ್ತಿಲ್ಲ ಎಂಬ ಆಕ್ಷೇಪ ನಾಗರಿಕ ವಲಯದಿಂದ ಕೇಳಿಬಂದಿದೆ.

ಪ್ರವಾಹ ಸಾಮಾನ್ಯ: ಬಿದ್ದ ಬಹುತೇಕ ಮರಗಳು ವಿದೇಶಿ ಪ್ರಭೇದಗಳಾಗಿದ್ದು, ನೆಲದಾಳಕ್ಕೆ ಬೇರುಗಳು ಇಳಿಯದೆ ಮೇಲ್ಭಾಗದಲ್ಲೇ ಹರಡಿಕೊಂಡಿರುತ್ತದೆ. ಜತೆಗೆ ರಸ್ತೆ, ುಟ್​ಪಾತ್​ ಬದಿಯಲ್ಲಿ ಮರಗಳು ಬೆಳವಣಿಗೆ ಹೊಂದಲು ಮಣ್ಣಿನ ಆಸರೆ ಇರುವುದಿಲ್ಲ. ಇಂಥ ಸ್ಥಳಗಳಲ್ಲಿ ಬಾಗಿದ ಮರಗಳನ್ನು ತೆರವುಗೊಳಿಸುವಂತೆ ಜನರು ಅರಣ್ಯ ವಿಭಾಗದ ಅಧಿಕಾರಿಗಳಿಗೆ ತಿಳಿಹೇಳಿದರೂ ತೆರವು ಮಾಡುವ ಗೋಜಿಗೆ ಹೋಗುವುದಿಲ್ಲ. ಸುಸ್ಥಿತಿಯಲ್ಲಿರುವ ಮರಗಳ ತೆರವು ಮಾಡಬಾರದೆಂಬ ನಿಯಮವನ್ನು ಶಿಥಿಲ ಮರಗಳಿಗೂ ಅನ್ವಯಿಸುತ್ತಿರುವ ಕಾರಣ ಭಾರೀ ಮಳೆ ವೇಳೆ ಮರಗಳು ಬೀಳುತ್ತಿವೆ. ಅಲ್ಲದೆ, ಸಣ್ಣ ಮಳೆಗೆ ರಾಜಧಾನಿಯಲ್ಲಿ ಪ್ರವಾಹ ಉಂಟಾಗುವುದು, ಅಂಡರ್​ಪಾಸ್​ಗಳಲ್ಲಿ ನೀರು ನಿಲ್ಲುವುದು ಸಾಮಾನ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net