ಖೋಟಾ ನೋಟು ಕೊಟ್ಟರೂ ಈತ ಬೇಡ ಎನ್ನಲಿಲ್ಲ; ಭಲೇ ಮಂಜುನಾಥ ಭಲೇ..!

fake-note-300x179
Published on

ಬೆಂಗಳೂರು: ಯಾರಾದರೂ ಕೊಟ್ಟ ನೋಟು ನಕಲಿ ಎಂಬ ಅನುಮಾನ ಬಂದರೆ ಅದನ್ನು ಸ್ವೀಕರಿಸಬೇಕಾದವರು ಸಾಮಾನ್ಯವಾಗಿ ಮಾಡುವ ಕೆಲಸವೆಂದರೆ, 'ಇದು ಬೇಡ, ಬೇರೆ ಕೊಡಿ..' ಎನ್ನುವುದು. ಆದರೆ ಈ ಆಸಾಮಿ ಬೇಡ ಎನ್ನಲೇ ಇಲ್ಲ. ಬದಲಿಗೆ ಅದನ್ನು ಸ್ವೀಕರಿಸಿದ. ಬಳಿಕ ಮುಂದಾಗಿದ್ದು ಸಾಮಾನ್ಯವಾಗಿ ಯಾರೂ ಊಹಿಸಿರದಂಥದ್ದು.

ಆಟೋಚಾಲಕನೊಬ್ಬ ಇಂಥದ್ದೊಂದು ಕೆಲಸ ಮಾಡಿದ್ದು, ಆತ ಖೋಟಾ ನೋಟು ಸ್ವೀಕರಿಸಿದ್ದರೂ ಈಗ ಎಲ್ಲರಿಂದಲೂ ಭಲೇ ಎನಿಸಿಕೊಂಡಿದ್ದಾನೆ. ವಿನಾಯಕನಗರ ನಿವಾಸಿ ಆಗಿರುವ ಈ ಆಟೋ ಚಾಲಕನ ಹೆಸರು ಮಂಜುನಾಥ್. ಡಿ. 24ರ ರಾತ್ರಿ ಈತ ಆಟೋ ಬಾಡಿಗೆಗೆ ಓಡಿಸುತ್ತಿದ್ದಾಗ ರಾತ್ರಿ 1.15ರ ಸುಮಾರಿಗೆ ಸಿಟಿ ಮಾರ್ಕೆಟ್​ ಬಳಿ ಅಡ್ಡಗಟ್ಟಿದ್ದ ಒಬ್ಬ, ಶಾಂತಿನಗರ ಬಸ್​ ನಿಲ್ದಾಣಕ್ಕೆ ಡ್ರಾಪ್​ ಕೊಡುವಂತೆ ಕೇಳಿದ್ದಾನೆ. ಶಾಂತಿನಗರಕ್ಕೆ ಕರೆತಂದು ಬಿಡುವಷ್ಟರಲ್ಲಿ ಆಟೋ ಪ್ರಯಾಣ ದರ 50 ರೂ. ಆಗಿತ್ತು. ಪ್ರಯಾಣಿಕ ನೂರು ರೂಪಾಯಿ ನೋಟು ಕೊಟ್ಟಿದ್ದ.

ಆ ನೋಟನ್ನು ಮುಟ್ಟುತ್ತಿದ್ದಂತೆ ಮಂಜುನಾಥಗೆ ಅನುಮಾನ ಬಂದಿದೆ. ಹೀಗಾಗಿ ತನ್ನ ಬಳಿ ಇರುವ ನೂರರ ಇನ್ನೊಂದು ನೋಟಿನೊಂದಿಗೆ ತಾಳೆ ಹಾಕಿ ಗಮನಿಸಿದ್ದಾನೆ. ಆಗ ಆ ನೋಟು ನಕಲಿ ಎಂಬುದು ಗೊತ್ತಾಗಿದೆ. ಆಗ 'ಚಿಲ್ಲರೆ ಇಲ್ಲ, ಮುಂದೆ ಅಂಗಡಿಯಲ್ಲಿ ಪಡೆದು ಕೊಡುವೆ' ಎಂಬುದಾಗಿ ಹೇಳಿ 100 ರೂ. ತನ್ನಲ್ಲೇ ಇಟ್ಟುಕೊಂಡು ಪ್ರಯಾಣಿಕನನ್ನು ಆಟೋದಲ್ಲೇ ಕೂರಿಸಿಕೊಂಡು ನೇರ ವಿಲ್ಸನ್ ಗಾರ್ಡನ್ ಠಾಣೆಗೆ ಕರೆತಂದು ಪೊಲೀಸರಿಗೆ ಒಪ್ಪಿಸಿದ್ದಾನೆ.

ಪೊಲೀಸರು ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಜಮಾಲ್ ಅಕ್ತರ್ ಎಂಬುದು ಗೊತ್ತಾಗಿದೆ. ತೀವ್ರ ವಿಚಾರಣೆ ನಡೆಸಿದಾಗ ನಕಲಿ ನೋಟು ತಯಾರಿಸುತ್ತಿದ್ದಾಗಿ ಬಾಯ್ಬಿಟ್ಟಿದ್ದಾನೆ. ಇನ್‌ಸ್ಪೆಕ್ಟರ್ ಶಂಕರಾಚಾರಿ ನೇತೃತ್ವದ ತಂಡ ಜಮಾಲ್ ಮನೆ ಮೇಲೆ ದಾಳಿ ನಡೆಸಿದಾಗ ಪ್ರಿಂಟರ್ ಬಳಸಿ ನೂರರ ಮುಖ ಬೆಲೆಯ ನಕಲಿ ನೋಟು ತಯಾರಿಸುತ್ತಿದ್ದ ಜಾಲ ಪತ್ತೆಯಾಗಿದೆ. ಬಂಧಿತ ಕೊಟ್ಟ ಸುಳಿವಿನ ಮೇಲೆಗೆ ಮತ್ತಿಬ್ಬರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಅನುಚೇತ್ ಮಾಹಿತಿ ನೀಡಿದ್ದಾರೆ.

ಆಟೋ ಚಾಲಕ ಮಂಜುನಾಥ ತೋರಿದ ಸಮಯಪ್ರಜ್ಞೆಯಿಂದ ಖೋಟಾ ನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದ ಜಾಲ ಪತ್ತೆಯಾಗಿದ್ದು, ವಿಲ್ಸನ್‌ಗಾರ್ಡನ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪಾದರಾಯನಪುರ ಅರಾತ್‌ನಗರದ ಇಮ್ರಾನ್, ಮುಬಾರಕ್ ಮತ್ತು ಜಮಾಲ್ ಬಂಧಿತರು. ಆರೋಪಿಗಳಿಂದ ಕೋಟ್ಯಂತರ ರೂ. ಮೌಲ್ಯದ ನಕಲಿ ನೋಟು ಜಪ್ತಿ ಮಾಡಲಾಗಿದೆ. ಶನಿವಾರ ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆಯಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net