

ಕೆ.ಆರ್.ನಗರ: 513 ಕೋಟಿ ರೂ.ಗೂ ಹೆಚ್ಚು ಅನುದಾನದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಕಾರ್ಯಕ್ರಮ ಕೆ.ಆರ್.ನಗರ ಇತಿಹಾಸದಲ್ಲೇ ಐತಿಹಾಸಿಕ ಕಾರ್ಯಕ್ರಮವಾಗಿ ಉಳಿಯಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಡಾ.ರಾಜಕುಮಾರ ಬಾನಂಗಳದಲ್ಲಿ ಶುಕ್ರವಾರ ಆಯೋಜಿಸಿದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಹಾಗೂ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೆ.ಆರ್.ನಗರ ಕ್ಷೇತ್ರಕ್ಕೆ ಇಲ್ಲಿಯವರೆಗೆ ಒಂದು ಹಿಡಿ ಮಣ್ಣು ಹಾಕಿಲ್ಲ ಎಂದು ಹೇಳುತ್ತಿದ್ದ ವಿರೋಧಿಗಳಿಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಕ್ಷೇತ್ರಕ್ಕೆ ಎರಡು ವರ್ಷಗಳ ಅವಧಿಯಲ್ಲಿ 800 ಕೋಟಿ ರೂ.ಗಿಂತ ಹೆಚ್ಚು ಅನುದಾನ ತಂದಿದ್ದು ನಮ್ಮ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕಿನ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ 400 ಕೋಟಿ ರೂ. ತಲುಪಿದೆ. ಈ ಭಾಗದ ರೈತರ ಜೀವನಾಡಿಯಾದ ಚುಂಚನಕಟ್ಟೆಯ ಶ್ರೀರಾಮ ಸಕ್ಕರೆ ಕಾರ್ಖಾನೆ ಅನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿ ಅಂಬಿಕಾ ಶುಗರ್ಸ್ ಬಂದು ಏನಾಯಿತು ನಿರಾಣಿ ಶುಗರ್ಸ್ ಬಂದು ಅಗ್ರೀಮೆಂಟ್ ಮಾಡದೆ ಅವರು ಏನಾಯ್ತು ಎಂಬುದನ್ನು ಜನತೆಗೆ ಗೊತ್ತಿದ್ದು ನಾನು ಅಧಿಕಾರಕ್ಕೆ ಬಂದ ತಕ್ಷಣ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದಿದ್ದು 40 ವರ್ಷಗಳ ಅವಧಿಗೆ ನಿರಾಣಿ ಶುಗರ್ಸ್ ಅವರಿಗೆ ಅಗ್ರಿಮೆಂಟ್ ಮಾಡಿಸಿದ್ದು ಶೀಘ್ರವಾಗಿ ಕಾರ್ಖಾನೆ ಪ್ರಾರಂಭವಾಗಲಿದೆ ಎಂದರು.
ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವೀರಶೈವ ಸಮಾಜದ ಬಸವ ಭವನ ನಿರ್ಮಾಣಕ್ಕೆ ಸರ್ಕಾರಕ್ಕೆ ಮನವಿ ಮಾಡಿದ್ದು ಮುಖ್ಯಮಂತ್ರಿಗಳು ಮರು ಮಂಜೂರಾತಿ ಮಾಡಲು ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ. ಕಳೆದ 15 ವರ್ಷಗಳ ಕಾಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಲಿಲ್ಲ. ಇದರಿಂದಾಗಿ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಆಗಿದ್ದು ಅಂತಹ ಗ್ರಾಮಗಳಿಗೆ ಕಾಳಜಿ ವಹಿಸಿ ಹೆಚ್ಚು ಅನುದಾನ ನೀಡುವ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಕೆ ಆರ್ ನಗರಕ್ಕೆ ಕಾನೂನು ಪದವಿ ಕಾಲೇಜು ಮಂಜೂರಾಗಿದ್ದು ಇದರ ಜತೆಗೆ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳನ್ನು ಮುಖ್ಯಮಂತ್ರಿಗಳು ಮಂಜೂರು ಮಾಡಿಸಿಕೊಡಬೇಕಾಗಿದೆ. ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ 30 ಕೋಟಿ ರೂ. ವಿಶೇಷ ಅನುದಾನ ಮಧುವನಹಳ್ಳಿ ರಸ್ತೆಗೆ 30 ಕೋಟಿ ರೂ. ಅನುದಾನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಮತ್ತು ಡಾ.ಬಾಬು ಜಗಜೀವನ ರಾಮ್ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲು ಸಮಾಜ ಕಲ್ಯಾಣ ಇಲಾಖೆ ಸಚಿವರು ಹೆಚ್ಚಿನ ಅನುದಾನ ನೀಡಬೇಕೆಂದು ಕೋರಿದರು.
ಮುಂದಿನ ಜಯಂತಿ ಒಳಗೆ ಎರಡು ಭವನಗಳನ್ನು ಪೂರ್ಣಗೊಳಿಸಿ ಇಬ್ಬರು ನಾಯಕರ ಪ್ರತಿಮೆಗಳನ್ನು ಸ್ಥಾಪಿಸಿ ಉದ್ಘಾಟನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರೆಸಿ, ಉದ್ಘಾಟಿಸುವ ಭರವಸೆ ನೀಡಿದರು.