ಕೆಲಸಕ್ಕಾಗಿ ಊರು ಬಿಟ್ಟಿದ್ದ ಐವರು ಮಾರ್ಗಮಧ್ಯೆಯೇ ಇಲ್ಲವಾದರು; ಬೆಳ್ಳಂಬೆಳಗ್ಗೆಯೇ ಕಂಡುಬಂತು ನೋಡಲಾಗದ ಭೀಕರ ದೃಶ್ಯ

Untitled-1
Published on

ಚಿತ್ರದುರ್ಗ: ಇವರೆಲ್ಲ ಕೆಲಸ ಹುಡುಕಿಕೊಂಡು ಊರು ಬಿಟ್ಟಿದ್ದರು. ಆದರೆ ಕೆಲಸ ಅರಸಿ ರಾಜಧಾನಿ ತಲುಪಬೇಕಿದ್ದ ಇವರು ಮಾರ್ಗಮಧ್ಯೆಯೇ ಇಹಲೋಕ ತ್ಯಜಿಸುವಂತಾಗಿದೆ. ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸಕ್ಕೆ ದಂಪತಿ ಸೇರಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಕೆಎಸ್​ಆರ್​ಟಿಸಿ ಬಸ್​ ಹಾಗೂ ಕ್ರೂಸರ್ ವಾಹನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಡ-ಹೆಂಡತಿ ಜತೆಗೆ ಇನ್ನು ಮೂವರು ಕೂಲಿ ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಿಜಿಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ 150Aನಲ್ಲಿ ಮುಂಜಾನೆ ಮೂರು ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ಈ ಐವರು ಕಾರ್ಮಿಕರು ಕೆಲಸ ಅರಸಿಕೊಂಡು ರಾಯಚೂರು ಜಿಲ್ಲೆ ಲಿಂಗಸುಗೂರಿನಿಂದ ರಾಜಧಾನಿ ಬೆಂಗಳೂರಿಗೆ ಹೊರಟಿದ್ದರು. ರಾಯಚೂರಿನಿಂದ ಬೆಂಗಳೂರು ಕಡೆಗೆ ಹೊರಟಿದ್ದ ಕ್ರೂಸರ್ ಹಾಗೂ ಬೆಂಗಳೂರಿನಿಂದ ರಾಯಚೂರು ಕಡೆಗೆ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್​ ನಡುವೆ ಈ ಭೀಕರ ಅಪಘಾತ ಸಂಭವಿಸಿದೆ. ಐವರ ಸಾವಿನ ಜತೆಗೆ ಇನ್ನೂ ಕೆಲವರಿಗೆ ಗಾಯಗಳಾಗಿವೆ. ಸ್ಥಳೀಯ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಜರುಗಿಸುತ್ತಿದ್ದಾರೆ.

ಮೃತರೆಲ್ಲರೂ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನವರು. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹೊಸೂರು ಗ್ರಾಮದ , ತಿಮ್ಮಣ್ಣ (40), ಅವರ ಪತ್ನಿ ರತ್ನಮ್ಮ (38), ಸೋಮನ ಮರಡಿ ಗ್ರಾಮದ ದುರುಗಪ್ಪ (16), ಗಜಿಲಿ ಗ್ರಾಮದ ಮಹೇಶ (19) ಹಾಗೂ 55 ವರ್ಷದ ಒಬ್ಬರು ಮೃತಪಟ್ಟಿದ್ದು, ಅವರ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ. ಮೃತರ ಪಾರ್ಥಿವ ಶರೀರಗಳನ್ನು ಮೊಳಕಾಲ್ಮೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net