ಮೇ 2ರಂದು ತಿರುನಕ್ಷತ್ರ ಮಹೋತ್ಸವ

24mlk1
ಮೇಲುಕೋಟೆಯ ರಾಮಾನುಜರ ಜಯಂತ್ಯುತ್ಸವದ ಮೊದಲ ದಿನ ಪುಷ್ಪಾಲಂಕೃತ ಸಮರಭೂಪಾಲವಾಹನೋತ್ಸವ ವೈಭವದಿಂದ ನೆರವೇರಿತು.  
Published on

ಮೇಲುಕೋಟೆ: ಸಮಾನತೆಯ ಹರಿಕಾರ ರಾಮಾನುಜಾಚಾರ್ಯರ 1008ನೇ ತಿರುನಕ್ಷತ್ರಮಹೋತ್ಸವ ಅವರದೇ ಕರ್ಮಭೂಮಿಯಾದ ಮೇಲುಕೋಟೆಯಲ್ಲಿ ಮೇ 2ರಂದು ವೈಭವದಿಂದ ನೆರವೇರಲಿಲಿದೆ. ತತ್ಸಂಬಂಧ ಧಾರ್ಮಿಕ ಕಾರ್ಯಕ್ರಮಗಳು ಬುಧವಾರದಿಂದ ಆರಂಭವಾಗಿದ್ದು, ಹತ್ತು ದಿನಗಳ ಕಾಲ ನಡೆಯಲಿದೆ.

ಬುಧವಾರ ರಾಮಾನುಜಾಚಾರ್ಯರಿಗೆ ಪುಷ್ಪಾಲಂಕೃತ ಸಮರಭೂಪಾಲವಾಹನೋತ್ಸವ ನಡೆದರೆ, ಗುರುವಾರ ಹಂಸವಾಹನ ನೆರವೇರಿತು. ಆಚಾರ್ಯರ ತಿರುನಕ್ಷತ್ರಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಚೆಲುವನಾರಾಯಣಸ್ವಾಮಿ ದೇವಾಲಯದ ಪೂಜಾಕೈಂಕರ್ಯಗಳು ಹತ್ತು ದಿನಗಳ ಕಾಲವೂ ಬೆಳಗಿನ 5.30ಕ್ಕೆ ಆರಂಭವಾಗಿ ರಾತ್ರಿ 8 ಗಂಟೆವರೆಗೆ ವಿವಿಧ ವಾಹನೋತ್ಸವಗಳು ಪ್ರಬಂಧಪಾರಾಯಣ ಮಂಗಳವಾದ್ಯದೊಡನೆ ಚತುರ್ವೀದಿಗಳಲ್ಲಿ ಉತ್ಸವ ನಡೆಯಲಿದೆ.

ಮೇ 1ರಂದು ಮಹಾರಥೋತ್ಸವ ನಡೆಯಲಿದ್ದು ಮೇ 2ರಂದು ರಾಮಾನುಜಾಚಾರ್ಯರ ತಿರುನಕ್ಷತ್ರಮಹೋತ್ಸವ ನಡೆಯಲಿದೆ. ರಥೋತ್ಸವ ಹಾಗೂ ತಿರುನಕ್ಷತ್ರ ಮಹೋತ್ಸವದಂದು ಮೇಲುಕೋಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ.

ಏ. 27ರ ರಾತ್ರಿ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ, 28ರ ರಾತ್ರಿ ಗೋವಿಂದರಾಜಮುಡಿ ಉತ್ಸವ ನಡೆಯಲಿದೆ. ಮೇ 2ರಂದು ಇಡೀ ದಿನ ರಾಮಾನುಜರ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಲಿದೆ. ಮೇಲುಕೋಟೆಗೆ ಬರುವ ಭಕ್ತರು ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕೈಂಕರ್ಯಗಳನ್ನು ಅನುಸರಿಸಿ ದೇವರದರ್ಶನ ಪಡೆದು ಸಹಕರಿಸಬೇಕು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ, ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಆನಂದಾಳ್ವಾರ್ ಪರಿಚಾರಕ ಹಾಗೂ ಪಾರುಪತ್ತೇಗಾರ್ ಎಂ.ಎನ್ ಪಾರ್ಥಸಾರಥಿ ಮನವಿ ಮಾಡಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net