

ಬೆಂಗಳೂರು: ನಾಳೆಯಿಂದ (ಶುಕ್ರವಾರ) ಮೂರು ದಿನಗಳ ಕಾಲ ನಡೆಯುವ ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಅಂತಿಮ ಹಂತದ ಸಿದ್ಧತೆಗಳು ನಡೆದಿದ್ದು, 2300 ಕಿ.ಮೀ ದೂರದ ಶ್ರೀರಾಮ ಕ್ಷೇತ್ರದಿಂದ ಬರಲಿರುವ ಜ್ಯೋತಿಯಿಂದ ದೀಪಬೆಳಗುವ ಮೂಲಕ ವಿಶ್ವ ಹವ್ಯಕ ಸಮ್ಮೇಳನದ ಉದ್ಘಾಟನೆಯಾಗಲಿದೆ.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪ್ರಾಚೀನ ಅಹಿಚ್ಛತ್ರ ಗ್ರಾಮದಲ್ಲಿರುವ ಶ್ರೀರಾಮದೇವಾಲಯದಲ್ಲಿ ಕಳೆದ 50 ವರ್ಷಗಳಿಂದ ಅಖಂಡ ಜ್ಯೋತಿ ಬೆಳಗುತ್ತಿದ್ದು, ಆ ಜ್ಯೋತಿಯಿಂದ ‘ಅಹಿಚ್ಛತ್ರ ಜ್ಯೋತಿ’ಗೆ ಚಾಲನೆ ನೀಡಲಾಗಿದೆ.
ಉತ್ತರಕನ್ನಡದ ಹೈಗುಂದದ ದುರ್ಗಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುವುದರ ಮೂಲಕ ಅಹಿಚ್ಛತ್ರ ಯಾತ್ರೆಗೆ ಚಾಲನೆ ನೀಡಲಾಗಿತ್ತು. ಅಹಿಚ್ಛತ್ರದಿಂದ ಹೊರಟಿರುವ ಜ್ಯೋತಿ ಬೆಂಗಳೂರಿಗೆ ಬರಲಿದೆ.
ಶತಮಾನಗಳ ಹಿಂದೆ ದ್ರಾವಿಡ ಬ್ರಾಹ್ಮಣ ಪಂಗಡಕ್ಕೆ ಸೇರಿದ ಹವ್ಯಕರ ಪೂರ್ವಜರ ಕುಟುಂಬಗಳನ್ನು ಕದಂಬ ವಂಶದ ದೊರೆ ರಾಜಾ ಮಯೂರವರ್ಮ ಯಾಗಾದಿ ಕಾರ್ಯಕ್ಕಾಗಿ ಅಹಿಚ್ಛತ್ರದಿಂದ ಬನವಾಸಿಗೆ ಕರೆದುಕೊಂಡು ಬಂದನೆಂಬ ಇತಿಹಾಸವಿದ್ದು, ಆ ಕಾರಣಕ್ಕಾಗಿ ಅಹಿಚ್ಛತ್ರದಿಂದ ಜ್ಯೋತಿಯನ್ನು ತಂದು, ಐತಿಹಾಸಿಕ ವಿಶ್ವ ಹವ್ಯಕ ಸಮ್ಮೇಳನಕ್ಕೆ ಚಾಲನೆ ನೀಡಲಾಗುತ್ತಿದೆ.