

ಬೆಂಗಳೂರು: ಜಕ್ಕೂರು ಲೇಔಟ್‌ನ ಬಿ.ಜಿ. ನ್ಯಾಷನಲ್ ಪಬ್ಲಿಕ್ ಶಾಲೆ ವಾರ್ಷಿಕ ಕ್ರೀಡೋತ್ಸವ ಸ್ಪೋರ್ಟ್ಸಾಥಾನ್ 2024 ಅನ್ನು ಅದ್ದೂರಿಯಾಗಿ ನಡೆಸಿತು.
ಕ್ರೀಡಾ ಜ್ಯೋತಿ ಬೆಳಗುವ ಮೂಲಕ ಕ್ರೀಡೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಶಾಲೆಯ ಪುಟ್ಟ ಮಕ್ಕಳು ತಮ್ಮ ಅದ್ಭುತ ಪ್ರದರ್ಶನಗಳಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ಮಾತನಾಡಿ, ಬಿ.ಜಿ. ನ್ಯಾಷನಲ್ ಪಬ್ಲಿಕ್ ಶಾಲೆಯು ಪ್ರತಿವರ್ಷ ಮಕ್ಕಳಿಗೆ ಏರ್ಪಡಿಸುವ ಕ್ರೀಡೋತ್ಸವ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸುತ್ತದೆ. ಜೊತೆಗೆ ಪೋಷಕರಿಗಾಗಿ ಕೂಡ ವಿಶೇಷ ಕ್ರೀಡೆಗಳನ್ನು ಏರ್ಪಡಿಸುವುದರಿಂದ ಶಾಲೆಯ ವಾತಾವರಣದಲ್ಲಿ ಸಂಭ್ರಮ ಮನೆಮಾಡುತ್ತದೆ. ಆಟದ ಜೊತೆಗೆ ಪಾಠಕ್ಕೂ ವಿಶೇಷ ಒತ್ತು ನೀಡುತ್ತಿದ್ದು, ಪ್ರತಿವರ್ಷ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ಕಾರಣೀಭೂತರಾಗಿರುವ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಎಲ್ಲ ಸಿಬ್ಬಂದಿಗಳು ಅಭಿನಂದನಾರ್ಹರು ಎಂದರು.
ಕಾರ್ಯಕ್ರಮದಲ್ಲಿ ಅಬಕಾರಿ ಉಪ ಅಧೀಕ್ಷಕ ಗಿರೀಶ್ ಎ.ವಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್. ರಾಮಮೂರ್ತಿ, ಅಮೃತಹಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕರಾದ ಜ್ಯೋತಿ ಮಾಜಿ ಜಿ.ಪಂ ಸದಸ್ಯ ರವಿಕುಮಾರ್, ಶಾಲಾ ಕಾರ್ಯದರ್ಶಿ ಎಂ.ಬಿ. ಲಿಂಗರಾಜ್, ಪ್ರಾಂಶುಪಾಲರಾದ ಶಮಂತ ಲಿಂಗರಾಜು ಮತ್ತಿತರರು ಪಾಲ್ಗೊಂಡಿದ್ದರು.