ಇಷ್ಟಾರ್ಥ ಕರುಣಿಸುವ ತೋಪಿನ ತಿಮ್ಮಪ್ಪ ಸ್ವಾಮಿ

ಇಷ್ಟಾರ್ಥ ಕರುಣಿಸುವ ತೋಪಿನ ತಿಮ್ಮಪ್ಪ ಸ್ವಾಮಿ
Published on

ಎಂ.ಪಿ.ವೆಂಕಟೇಶ್ ಮದ್ದೂರು

ತಾಲೂಕಿನ ಆಬಲವಾಡಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ತೋಪಿನ ತಿಮ್ಮಪ್ಪ ಸ್ವಾಮಿ ದೇಗುಲಕ್ಕೆ ಸುಮಾರು 823 ವರ್ಷಗಳ ಇತಿಹಾಸ ಹೊಂದಿದ್ದು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮೂಲಕ ಭಕ್ತರ ನೆಚ್ಚಿನ ದೇವರಾಗಿದ್ದಾರೆ.

ದೇಗುಲಕ್ಕೆ ಆಗಮಿಸಿ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಭಕ್ತರದ್ದು, ಮಂಡ್ಯ, ಬೆಂಗಳೂರು, ಮೈಸೂರು, ರಾಮನಗರ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ.

ದೇಗುಲದಲ್ಲಿ ಶನಿವಾರ ಮತ್ತು ಬುಧವಾರ ವಿಶೇಷ ಪೂಜಾ ಕೈಂಕರ್ಯ ನೆರವೇರುತ್ತದೆ.

ಪ್ರತಿ ವರ್ಷದ ಆಷಾಢ ಮಾಸದಲ್ಲಿ ತೋಪಿನ ತಿಮ್ಮಪ್ಪನ ಹರಿಸೇವೆ ಹಾಗೂ ಕಾರ್ತಿಕ ಮಾಸದ ಕಡೆಯ ಸೋಮವಾರ ದೀಪೋತ್ಸವ, ವೈಕುಂಠ ಏಕಾದಶಿ, ರಥ ಸಪ್ತಮಿ ಸೇರಿದಂತೆ ವಿಶೇಷ ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ದೇಗುಲದ ವಿಶೇಷವಾಗಿದೆ. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಹರಕೆ, ಅಭಿಷ್ಟೆಗಳನ್ನು ಸಲ್ಲಿಸುತ್ತಾರೆ.

ದೇಗುಲದ ಐತಿಹ್ಯ: ಸುಮಾರು 823 ವರ್ಷಗಳ ಹಿಂದೆ ಆಬಲವಾಡಿ ಗ್ರಾಮದಲ್ಲಿ ಸಮೃದ್ಧವಾಗಿ ಹುಣಸೆ ಮರದ ತೋಪಿತ್ತು. ವೈಕುಂಠದಲ್ಲಿದ್ದ ಶ್ರೀ ಮಹಾ ವಿಷ್ಣು ಲಕ್ಷ್ಮೀಯನ್ನು ಅರಸಿಕೊಂಡು ಭೂಮಿಗೆ ಇಳಿದು ಬಂದರು. ಈ ವೇಳೆ ಹಸಿವು ನಿದ್ರೆ ತಾಳಲಾಗದೆ ಶ್ರೀ ಮಹಾವಿಷ್ಣು ಹುಣಸೆ ಮರದಲ್ಲಿದ್ದ ಹುಣಸೆ ಹಣ್ಣನ್ನು ಕಿತ್ತುಕೊಂಡು ಕಚ್ಚಿಕೊಂಡು ಭೂ ದೇವಿಯ ಹುತ್ತದ ಆಕಾರದಲ್ಲಿದ ಪೀಠದ ತಾವರೆ ಎಲೆಯಲ್ಲಿ ಹಾಕಿಕೊಂಡು ತಿನ್ನುವ ಸಂದರ್ಭದಲ್ಲಿ ಶ್ರೀ ಮಾನ್ ನಾರದ ಮುನಿ ಆಗಮಿಸಿ ನೀನು ಬಕಳದೇವಿ ಆಶ್ರಮಕ್ಕೆ ಹೋಗಿ ಅಲ್ಲಿ ಪದ್ಮಾವತಿ ಕಾಯುತ್ತಿದ್ದಾಳೆ ಎಂದು ಸಲಹೆ ನೀಡಿದರು. ನಂತರ ಮಹಾವಿಷ್ಣು ತಿರುಪತಿ ಕಡೆಗೆ ಹೋದರು ಎಂಬ ಬಗ್ಗೆ ಮಾಹಿತಿ ಇದೆ.

ಆನಂತರ ಶಂಕರಾಚಾರ್ಯರು ಈ ಸ್ಥಳಕ್ಕೆ ಆಗಮಿಸಿದಾಗ ಈ ಸ್ಥಳದಲ್ಲಿ ಏನೋ ಒಂದು ವಿಶೇಷತೆ ಇದೆ ಎಂದು ತಿಳಿಸಿ ಹೋಗಿದ್ದರು. ಕಾಲಾನಂತರ ರಾಮಾನುಚಾರ್ಯರು ಆಗಮಿಸಿ ಇಲ್ಲಿ ಹುತ್ತ ಸ್ಥಳದಲ್ಲಿ ಚಿಕ್ಕದಾಗಿ ದೇಗುಲ ನಿರ್ಮಾಣ ಮಾಡಿದರು. ಆ ನಂತರ ಗ್ರಾಮಕ್ಕೆ ಆಗಮಿಸಿದ ಅಕ್ಕಿ ಹೆಬ್ಬಾಳುವಿನ ಭಕ್ತರು ಅಲ್ಲಿಂದ ಸ್ವಾಮಿಗೆ ನಿರಂತರವಾಗಿ ಸೇವೆ ಮಾಡಲು ಪ್ರಾರಂಭಿಸಿದರು.

ಹಲವಾರು ವರ್ಷಗಳ ನಂತರ ದೇವಸ್ಥಾನ ಶಿಥಿಲಗೊಂಡ ಸಂದರ್ಭದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣನವರು 2007 ಮತ್ತು 2008ರಲ್ಲಿ ಶಿಥಿಲಗೊಂಡ ದೇಗುಲವನ್ನು ಸ್ವಂತ ಹಣದ ಜತೆಗೆ ದಾನಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಸುಸಜ್ಜಿತವಾದ ದೇಗುಲವನ್ನು ನಿರ್ಮಾಣ ಮಾಡಿ ಗಮನ ಸೆಳೆದಿದ್ದರು.

ತಾವರೆ ಎಲೆ ಊಟ: ಸಾಮಾನ್ಯವಾಗಿ ದೇವರ ಹರಿ ಸೇವೆಗೆ ಇಸ್ತ್ರಿ ಎಲೆಯಲ್ಲಿ ಊಟ ಕೊಡುವುದು ವಿಶೇಷ. ಆಬಲವಾಡಿ ತೋಪಿನ ದೇವಸ್ಥಾನದಲ್ಲಿ ನಡೆಯುವ ಹರಿ ಸೇವೆಗೆ ದೇಶದಲ್ಲೇ ಪ್ರಥಮ ಎಂಬಂತೆ ಹಾಗೂ ಲಕ್ಷ್ಮೀದೇವಿಗೆ ತಾವರೆ ಎಲೆ ತುಂಬ ಇಷ್ಟ ಎಂಬ ಕಾರಣಕ್ಕೆ ಹರಿಸೇವೆಗೆ ಆಗಮಿಸುವ ಸಹಸ್ರಾರು ಭಕ್ತರಿಗೆ ತಾವರೆ ಎಲೆಯಲ್ಲಿ ಊಟ ಕೊಡಲಾಗುತ್ತದೆ.

ತಾವರೆ ಎಲೆಯನ್ನು ಮದ್ದೂರು ಸೇರಿದಂತೆ ಇತರ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಕೆರೆಗೆ ಹೋಗಿ ತಾವರೆ ಎಲೆಯನ್ನು ಸಂಗ್ರಹಿಸಲಾಗುತ್ತದೆ.

ಹರಿಸೇವೆಗೆ ಗ್ರಾಮಸ್ಥರು, ಭಕ್ತರು ಹಾಗೂ ದಾನಿಗಳು ತಾವರೆ ಎಲೆ, ಅಕ್ಕಿ, ಬೇಳೆ, ಸೌದೆ, ಬೆಲ್ಲ, ತುಪ್ಪ ಸೇರಿದಂತೆ ಇನ್ನಿತರ ವಸ್ತುಗಳನ್ನು ಕಾಣಿಕೆ ರೂಪದಲ್ಲಿ ನೀಡುತ್ತಾರೆ ಮತ್ತು ಆರ್ಥಿಕ ಸಹಾಯವನ್ನು ಮಾಡುತ್ತಾರೆ. ಹರಿಸೇವೆಯಲ್ಲಿ ಆಬಲವಾಡಿ ಗ್ರಾಮಸ್ಥರು ಒಟ್ಟಾಗಿ ಸೇರಿ ಸಹಸ್ರಾರು ಭಕ್ತರಿಗೆ ಊಟ ಉಣಬಡಿಸುವುದನ್ನು ನೋಡುವುದೇ ಒಂದು ರೀತಿಯ ಚೆಂದ.

ಮಾರ್ಗ: ಮದ್ದೂರಿನಿಂದ ಕೊಪ್ಪ ಮಾರ್ಗವಾಗಿ 18 ಕಿ.ಮೀ. ನಾಗಮಂಗಲದಿಂದ ದೇವಾಲಪುರ ಮಾರ್ಗವಾಗಿ 30 ಕಿ.ಮೀ. ಮಂಡ್ಯದಿಂದ ಕೆರೆಗೋಡು ಮಾರ್ಗವಾಗಿ 24 ಕಿ.ಮೀ.ದೂರದಲ್ಲಿ ತೋಪಿನ ತಿಮ್ಮಪ್ಪ ದೇಗುಲವಿದೆ.

ಕಾರ್ಯಕ್ರಮದ ವಿವರ: ಆಬಲವಾಡಿಯ ತೋಪಿನ ತಿಮ್ಮಪ್ಪ ದೇವಸ್ಥಾನದಲ್ಲಿ ಜುಲೈ 12 ಮತ್ತು 13ರಂದು ಹರಿಸೇವೆ ಕಾರ್ಯಕ್ರಮ ಸಡಗರ ಸಂಭ್ರಮದಿಂದ ನಡೆಯಲಿದ್ದು, ತೋಪಿನ ತಿಮ್ಮಪ್ಪ ಕಲ್ಯಾಣ ಮಂದಿರ ಸೇವಾ ಟ್ರಸ್ಟ್ ಹಾಗೂ ಭಕ್ತರು, ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.

ಜುಲೈ 12ರಂದು ಶನಿವಾರ ಮಧ್ಯಾಹ್ನ 1 ಗಂಟೆಗೆ ಮೀಸಲು ನೀರು ತರುವುದು, 2 ಗಂಟೆಗೆ ತಲೆ ಮುಡಿ, ಮಹಾ ಮಂಗಳಾರತಿ ರಾತ್ರಿ 6 ಗಂಟೆಗೆ ಬಂಡಿ ಮರೆವಣಿಗೆ, ರಾತ್ರಿ 12 ಗಂಟೆಗೆ ಬಾಯಿ ಬೀಗ, ರಾತ್ರಿ 1 ಗಂಟೆಗೆ ಸೋಮನ ಕುಣಿತ, ಜವಳಿ ಕುಣಿತ, ಮಂಗಳ ವಾದ್ಯ, ಮದ್ದಿನ ತಮಾಷೆ ಮತ್ತು ತಮಟೆಗಳೊಂದಿಗೆ ತಿಮ್ಮಪ್ಪನ ದೇವರ ಉತ್ಸವ ಮೂರ್ತಿ, ಶ್ರೀ ಲಕ್ಷ್ಮೀದೇವಿ, ಶ್ರೀ ಬಂಕದ ಘಟ್ಟಮ್ಮ, ಮದ್ದೇನಟ್ಟಮ್ಮ ದೇವರುಗಳ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಜುಲೈ 13 ಭಾನುವಾರ ದೇಗುಲದ ಆವರಣದಲ್ಲಿ ಸಹಸ್ರಾರು ಭಕ್ತರಿಗೆ ಬೆಳಗ್ಗೆ 8 ರಿಂದ ಮಧ್ಯಾಹ್ನ 12ರವರೆಗೆ ತಾವರೆ ಎಲೆಯಲ್ಲಿ ಅನ್ನಸಂತರ್ಪಣೆ (ಹರಿಸೇವೆ) ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಒಂದೇ ಬಾರಿ 20 ರಿಂದ 30 ಸಾವಿರ ಭಕ್ತರಿಗೆ ಊಟ ಬಡಿಸುವುದು ವಿಶೇಷವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಆಬಲವಾಡಿ ಗ್ರಾಮಸ್ಥರು, ಯಜಮಾನರುಗಳು, ಶ್ರೀ ತೋಪಿನ ತಿಮ್ಮಪ್ಪ ಕಲ್ಯಾಣ ಮಂದಿರ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಟ್ರಸ್ಟಿಗಳು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net