

ಚನ್ನಪಟ್ಟಣ : ತಾಲೂಕಿನ ಪುರಾಣ ಪ್ರಸಿದ್ದ ಬೇವೂರು ಗ್ರಾಮದ ಬೆಟ್ಟದ ತಿಮ್ಮಪ್ಪ ಸ್ವಾಮಿ (ವೆಂಕಟರಮಣಸ್ವಾಮಿ) ಬ್ರಹ್ಮರಥೋತ್ಸವ ಭಾನುವಾರ ಅದ್ದೂರಿಯಾಗಿ ನಡೆಯಿತು.
ಶ್ರೀ ಕ್ಷೇತ್ರದಲ್ಲಿ ನಡೆಯುವ ನವರಾತ್ರಿ ಉತ್ಸವ ಹಾಗೂ ಜಾತ್ರಾ ರಥೋತ್ಸವಕ್ಕೆ ತನ್ನದೇ ಆದ ವಿಶೇಷತೆಯಿದ್ದು, ಅ 3 ರಿಂದಲೇ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಆರಂಭಗೊಂಡಿತ್ತು. ಪ್ರಮುಖ ವಿಶೇಷವಾದ ಸ್ವಾಮಿಯ ಬ್ರಹ್ಮ ರಥೋತ್ಸವ ಭಾನುವಾರ ಸಹಸ್ತಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಬೆಳಗ್ಗೆ 9 ರಿಂದ 11 ರವರೆಗೆ ರಥಶಾಂತಿ ಪೂಜೆ ನಡೆಯಿತು. 11.55 ರಿಂದ 12.30ರಲ್ಲಿ ಬ್ರಹ್ಮರಥೋತ್ಸವಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಚಾಲನೆ ನೀಡಿದರು. ಬೇವೂರು ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ತಹಸೀಲ್ದಾರ್ ನರಸಿಂಹಮೂರ್ತಿ ಸೇರಿ ಹಲವರು ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬ್ರಹ್ಮರಥೋತ್ಸವದೊಂದಿಗೆ ಗರಡೋತ್ಸವ, ಗಜೋತ್ಸವ, ಶ್ರೀಯವರ ಕಲ್ಯಾಣೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ, ಹನುಮಾನ್ ಉತ್ಸವ ಸೇರಿ ವಿವಿಧ ಜನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ರಾತ್ರಿ ಬೆಟ್ಟದ ಆವರಣದಲ್ಲಿ ರಸಮಂಜರಿ ಕಾರ್ಯಕ್ರಮ ನಡೆಯಿತು. ರಥೋತ್ಸವದಲ್ಲಿ ಜಿಲ್ಲೆಯ ಸಾವಿರಾರು ಭಕ್ತರು ಭಾಗವಹಿಸಿ, ದೇವರ ದರ್ಶನ ಪಡೆದು ಇಷ್ಠಾರ್ಥ ನೆರವೇರಿಸುವಂತೆ ಬ್ರಹ್ಮರಥೋತ್ಸವಕ್ಕೆ ಬಾಳೆಹಣ್ಣು, ಜವನ ಎಸೆದು ಪ್ರಾರ್ಥಿಸಿದರು. ಭಕ್ತರಿಗೆ ಊಟದ ವ್ಯವಸ್ಥೆ ಆಯೋಜಿಸಲಾಗಿತ್ತು.
ಬೇವೂರು ಬೆಟ್ಟದ ತಿಮ್ಮಪ್ಪ ದೇವಸ್ಥಾನಕ್ಕೆ ಸಾಕಷ್ಟು ಐತಿಹಾಸಿಕ ಹಿನ್ನೆಲೆಯಿದ್ದು, ಇಲ್ಲಿ ನಡೆಯಲಿರುವ ನವರಾತ್ರಿಯ ಜಾತ್ರೆ ಮತ್ತು ಹಬ್ಬವನ್ನು ದಸರಾ ಹಬ್ಬದಂತೆ ಆಚರಿಸಲಾಗುತ್ತದೆ. ತಾಲೂಕಿನ ಮಿನಿ ದಸರಾ ಎಂತಲೂ ಕರೆಯಲಾಗುತ್ತದೆ. ಈ ಬಾರಿ ತಿಮ್ಮಪ್ಪಸ್ವಾಮಿಯ ಮೂರ್ತಿ ಹಾಗೂ ದೇಗುಲವನ್ನು ಹಣ್ಣು ಮತ್ತು ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ವಿದ್ಯುತ ದೀಪಾಲಂಕಾರದಿಂದ ಇಡೀ ಬೆಟ್ಟ ನಳನಳಿಸುತಿತ್ತು. ದೇವಾಲಯದ ಪ್ರಧಾನ ಅರ್ಚಕ ವೆಂಕಟೇಶ್ ಹಾಗೂ ಮೇಲ್ವಿಚಾರಕ ಬಿ.ಸಿ.ಪುಟ್ಟಸ್ವಾಮಿ, ಹಲವು ಆಗಮಿಕ ಅರ್ಚಕರು ರಥೋತ್ಸವದ ಯಶಸ್ವಿಗೆ ಶ್ರಮಿಸಿದರು.