ಜಿಲ್ಲಾಸ್ಪತ್ರೆಯಲ್ಲಿ ಕಳ್ಳರ ಕಾಟ

13-06-rama-District hospital
Published on

* ಸಿಸಿ ಕ್ಯಾಮರಾ ಇದ್ದರೂ ಗುರುತು ಪತ್ತೆಯಾಗುತ್ತಿಲ್ಲ * ಭದ್ರತಾ ಸಿಬ್ಬಂದಿ ಹೆಚ್ಚಿಸಲು ಬೇಡಿಕೆ ಗಂಗಾಧರ್ ಬೈರಾಪಟ್ಟಣ ರಾಮನಗರ ಸುಸಜ್ಜಿತವಾಗಿ ನಿರ್ಮಾಣಗೊಂಡು ಪ್ರತಿ ದಿನ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಹೌದು.. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಎಸ್‌ಪಿ ಕಚೇರಿ ಮುಂಭಾಗವೇ ಇರುವ ಬೃಹತ್ ಕಟ್ಟಡದಲ್ಲಿ ಪ್ರತಿ ದಿನ ಒಂದಿಲ್ಲೊಂದು ವಸ್ತುಗಳು ಕಳುವಾಗುತ್ತಿದ್ದು, ಸಿಬ್ಬಂದಿ, ರೋಗಿಗಳನ್ನು ನೋಡಿಕೊಳ್ಳುವ ಜತೆಗೆ ಕಳ್ಳರನ್ನು ಕಾಯುವ ಕೆಲಸ ಮಾಡಬೇಕಿದೆ.

ಮಧ್ಯಾಹ್ನವೇ ಕದ್ದರು

ಜಿಲ್ಲಾಸ್ಪತ್ರೆಯಲ್ಲಿ ಕಳ್ಳರ ಕಾಟ ಎಷ್ಟಾಗಿದೆ ಎಂದರೆ, ಮಧ್ಯಾಹ್ನವೇ ಕಳ್ಳತನ ಮಾಡಲಾಗುತ್ತಿದೆ. ಜಿಲ್ಲಾಸ್ಪತ್ರೆಗೆ ಪ್ರತಿ ದಿನ ಸಾವಿರಾರು ಮಂದಿ ಚಿಕಿತ್ಸೆಗೆಂದು ಬರುತ್ತಾರೆ. ಆದರೆ ಈ ಪೈಕಿ ಕೆಲವು ಖದೀಮರು ಚಿಕಿತ್ಸೆಗೆಂದು ಬಂದು ಶೌಚಗೃಹದ ಕೊಳಾಯಿಗಳನ್ನೂ ಬಿಡದೆ ಕಳವು ಮಾಡಿಕೊಂಡು ಹೋಗುತ್ತಿದ್ದಾರೆ. ಪ್ರತಿ ಬಾರಿ ನಲ್ಲಿಗಳು ಕಾಣೆ ಆದಾಗ ಹೊಸ ನಲ್ಲಿಗಳನ್ನು ಹಾಕಿಸಲಾಗುತ್ತಿದೆ. ಇದಿಷ್ಟೇ ಅಲ್ಲದೆ, ಕಟ್ಟಡದ ಕಾಂಪೌಂಡ್‌ನಲ್ಲಿರುವ ತೊಟ್ಟಿಯೊಂದರ ಸುಮಾರು 25 ಕೆಜಿ ತೂಕದ ಕಬ್ಬಿಣದ ಮುಚ್ಚಳವನ್ನೇ ಮಹಿಳೆಯೊಬ್ಬರು ಮಧ್ಯಾಹ್ನವೇ ಕಳವು ಮಾಡಿಕೊಂಡು ಹೋಗಿದ್ದಾರೆ. ಕೆಲವು ಮೀಟರ್ ಬೋರ್ಡ್‌ಗಳನ್ನೂ ಕಳವು ಮಾಡಿಕೊಂಡು ಹೋಗಲಾಗಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಯೊಬ್ಬರು ನೀಡಿದರು.

ಗುರುತು ಪತ್ತೆ ಆಗುತ್ತಿಲ್ಲ

ಜಿಲ್ಲಾಸ್ಪತ್ರೆಯಲ್ಲಿ ಸಿಸಿ ಕ್ಯಾಮರಾ ಇದ್ದರೂ ಕಳ್ಳರು ಗುರುತು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಬಹುತೇಕ ಮುಖ ಮುಚ್ಚಿಕೊಂಡೇ ಆಸ್ಪತ್ರೆಗೆ ಬರುವ ಕಳ್ಳರು ಕೆಲಸ ಮುಗಿಯುವವರೆಗು ಮುಖ ಮುಚ್ಚಿಕೊಂಡೇ ಎಲ್ಲವನ್ನೂ ನಿಭಾಯಿಸುತ್ತಾರೆ. ಆದರೆ, ಆಸ್ಪತ್ರೆಗೆ ಬರುವರಲ್ಲಿ ಹೆಚ್ಚಿನವರು ರೋಗಿಗಳು ಹಾಗೂ ಅವರ ಸಂಬಂಧಿಗಳೇ ಆಗಿರುವುದರಿಂದ ಯಾರ ಮೇಲೂ ಅನುಮಾನ ಪಡದ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರಿಗೆ ದೂರು ನೀಡಿದರೂ ಕಳ್ಳರ ಗುರುತು ಪತ್ತೆ ಮಾಡಲಾಗದಂತೆ ಆಗಿದೆ.

ಸಿಬ್ಬಂದಿ ಕೊರತೆ

ಬೃಹತ್ ಜಿಲ್ಲಾಸ್ಪತ್ರೆಗೆ ಈಗ ಇರುವ ಕೇವಲ ಒಬ್ಬನೇ ಕಾವಲುಗಾರ. ಈತ ಎಷ್ಟು ತಾನೇ ನೋಡಿಕೊಳ್ಳಲು ಸಾಧ್ಯ. ಕನಿಷ್ಠ ಇಲ್ಲಿಗೆ ಪ್ರತಿ ಪಾಳಿಯಲ್ಲಿ ಕೆಲಸ ಮಾಡಲು ಕನಿಷ್ಠ 4-5 ಮಂದಿ ಕಾವಲುಗಾರರ ಅಗತ್ಯವಿದೆ. ಮುಖ್ಯದ್ವಾರದಲ್ಲಿಯೇ ಮೂರು ಪಾಳಿಯಲ್ಲಿ ಕೆಲಸ ಮಾಡಲು ಪ್ರತಿ ದಿನ 3 ಮಂದಿ ಭದ್ರತಾ ಸಿಬ್ಬಂದಿಯ ಅಗತ್ಯವಿದೆ. ಆದರೆ, ಮಾನವ ಸಂಪನ್ಮೂಲವನ್ನು ಪಡೆದುಕೊಳ್ಳಲು ಬೇಕಾದ ಅನುಮತಿ ಈವರೆವಿಗೂ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯ ಭದ್ರತೆಗಾಗಿ ಹೆಚ್ಚಿನ ಸಿಬ್ಬಂದಿ ಒದಗಿಸಲು ಕೋರಲಾಗಿದೆ.

ಜಾಗೃತರಾಗಬೇಕಿದೆ

ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕಿದೆ. ಆಸ್ಪತ್ರೆಗೆ ಬರುವ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವ ಕೆಲಸ ಆರೋಗ್ಯ ಇಲಾಖೆ ಮಾಡಬೇಕಿದೆ. ಇದರ ಜತೆಗೆ ಆಗಾಗ್ಗೆ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ, ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಕೆಲಸ ಮಾಡಿದರೆ ಖಂಡಿತವಾಗಿ ಕಳ್ಳತನ ತಡೆಯಬಹುದಾಗಿದೆ. ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕಳ್ಳತನಗಳ ಹಿಂದೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕೆಲವರ ನೆರವೂ ಇರಬಹುದು ಎನ್ನುವ ಅನುಮಾನ ಇದ್ದು, ಇವೆಲ್ಲವುದರ ಬಗ್ಗೆ ಪೊಲೀಸರು ಗಮನ ಹರಿಸಬೇಕಿದೆ.

ರೋಗಿಗಳೋ, ಇಲ್ಲ ರೋಗಿಗಳ ಸೋಗಿನಲ್ಲೋ ಬಂದು ಆಸ್ಪತ್ರೆಯ ಆವರಣದಲ್ಲಿ ಇರುವ ಸಣ್ಣಪಟ್ಟು ವಸ್ತುಗಳನ್ನು ಕಳವು ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಗಾಗಿ ಹಿರಿಯ ಅಧಿಕಾರಿಗಳಲ್ಲಿ ಕೋರಲಾಗಿದೆ. ಡಾ.ಜಿ.ಎಲ್.ಪದ್ಮಾ,
ಜಿಲ್ಲಾ ಶಸ್ತ್ರ ಚಿಕಿತ್ಸಕಿ, ಜಿಲ್ಲಾಸ್ಪತ್ರೆ, ರಾಮನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net