ಮಂಗಳವಾರ ಮೂರು ಮನೆಗಳಲ್ಲಿ ಕಳ್ಳರ ಕೈಚಳಕ

FotoJet (1)
Published on

ಹಣ, ಚಿನ್ನಾಭರಣ ಕಳವು

ಚಿಂತಾಮಣಿ: ತಾಲೂಕಿನ ಕೈವಾರ ಹೋಬಳಿ ಸುಬ್ಬರಾಯನ ಪೇಟೆ ಗ್ರಾಮದ ತೋಟದ ಮನೆಯಲ್ಲಿ ಭಾನುವಾರ ಕಳವು ನಡೆದಿರುವ ಬೆನ್ನಲ್ಲೇ ಮಂಗಳವಾರ ರಾತ್ರಿ ಇದೇ ಹೋಬಳಿಯ ಸಂತೇಕಲ್ಲಹಳ್ಳಿಯ ಎರಡು ಮನೆ ಮತ್ತು ಹೀರೇಪಾಳ್ಯ ಗ್ರಾಮದ ಒಂದು ಮನೆಯಲ್ಲಿ ನಗ ಮತ್ತು ನಗದು ದೋಚಿರುವ ಘಟನೆ ನಡೆದಿದೆ.

ಸಂತೇಕಲ್ಲಹಳ್ಳಿ ಮುನಿರಾಜು ಎಂಬವರ ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ ಸುಮಾರು 74 ಸಾವಿರ ಹಣ ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ನಂತರ ಅದೇ ಗ್ರಾಮದ ಮುನೇಗೌಡ ಎಂಬುವರ ಮನೆಯ ಬೀಗ ಮುರಿದು ಮಗನ ಮದುವೆಗಾಗಿ ಕೂಡಿಟ್ಟಿದ್ದ 2 ಲಕ್ಷ ರೂ. ಮತ್ತು 30 ಗ್ರಾಂ. ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ.

ಚಿಂತಾಮಣಿ-ಬೆಂಗಳೂರು ಹೆದ್ದಾರಿಗೆ ಹೊಂದಿಕೊಂಡಿರುವ ಹೀರೇಪಾಳ್ಯ ಗ್ರಾಮದ ಮಹೇಶ್ ಎಂಬವರ ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು 10 ಸಾವಿರ ರೂ. ಹಾಗೂ 5 ಚಿನ್ನದ ರಿಂಗ್ ಮತ್ತು ಒಂದು ಜೊತೆ ಓಲೆಗಳನ್ನು ಕದ್ದಿದ್ದಾರೆ.

ಎಲ್ಲರ ಪ್ರಕರಣಗಳ ಬಗ್ಗೆ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಡಿವೈಎಸ್‌ಪಿ ಮುರಳೀಧರ್, ಇನ್‌ಸ್ಪೆಕ್ಟರ್ ಶಿವರಾಜ್, ಎಎಸ್‌ಐ ಪ್ರಕಾಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಪಲ್ಸರ್ ಬೈಕ್‌ನಲ್ಲಿ ಬಂದಿರುವ ಕಳ್ಳರು ಮುಖಕ್ಕೆ ಮಂಕಿ ಟೋಪಿ ಧರಿಸಿ ಓಡಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳತನ ನಡೆಸಿರುವ ಜಾಗದಲ್ಲಿ ಬೆರಳಚ್ಚು ಗುರುತು ಸಿಕ್ಕಿದ್ದು, ಕಳ್ಳರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net