

ಮೂಡುಬಿದಿರೆ: ಠಾಣಾ ವ್ಯಾಪ್ತಿಯಲ್ಲಿ ಆ.15 ಮತ್ತು ಸೆ.2ರಂದು ಮಹಿಳೆಯರ ಚಿನ್ನಾಭರಣ ಎಳೆದೊಯ್ದು ಪರಾರಿಯಾಗಿದ್ದ ಇಬ್ಬರು ಖದೀಮರನ್ನು ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಅವರ ತಂಡ ವಶಕ್ಕೆ ಪಡೆದಿದೆ.
ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದ ಬಳಿ ನಿರ್ಮಲ ಪಂಡಿತ್(70) ಎಂಬುವರ ಕುತ್ತಿಗೆಯಿಂದ ಸುಮಾರು 24 ಗ್ರಾಂ ಮೌಲ್ಯದ ಚಿನ್ನದ ಸರ ಮತ್ತು ಸೆ.2ರಂದು ಮೂಡುಮಾರ್ನಾಡು ಗ್ರಾಮದ ಬಸದಿ ಬಳಿ ನಿವಾಸಿ ಪ್ರೇಮಾ(82) ಎಂಬುವರ ಕುತ್ತಿಗೆಯಿಂದ ಸುಮಾರು 3 ಪವನ್ ತೂಕದ ಚಿನ್ನದ ಸರವನ್ನು ಸ್ಕೂಟರ್ನಲ್ಲಿ ಬಂದ ಇಬ್ಬರು ಅಪರಿಚಿತರು ಕಸಿದುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು. ಈ ಬಗ್ಗೆ ಕಾರ್ಯಾಚರಣೆ ಆರಂಭಿಸಿದ್ದ ಸಂದೇಶ್ ಪಿ.ಜಿ. ನೇತೃತ್ವದ ಪೊಲೀಸರ ತಂಡ ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮ ಚೆಂಬುಗುಡ್ಡೆ ನಿವಾಸಿ ಹಬೀಬ್ ಹಸನ್ ಯಾನೆ ಹಬ್ಬಿ ಯಾನೆ ಹಬ್ಬಿ ಚೆಂಬುಗುಡ್ಡೆ(42) ಮತ್ತು ಬಂಟ್ವಾಳ ತಾಲೂಕು ಜೋಡುಮಾರ್ಗ ಅಂಚೆಯ ಬಿ&ಮೂಡಾ ಅದ್ಯಾಡಿ ಮನೆಯ ಉಮ್ಮರ ಸಿಯಾಫ್ ಯಾನೆ ಚಿಯಾ(29) ಎಂಬುವರನ್ನು ಬಂಧಿಸಿದೆ.
ಕೃತ್ಯಕ್ಕೆ ಬಳಸಿದ ಟಿವಿಎಸ್ ಸ್ಕೂಟರ್ ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ಕಳವು ಆಗಿರುವ ಸ್ಕೂಟರ್ ಆಗಿದ್ದು, ಆರೋಪಿಗಳಿಂದ ಈ ಸ್ಕೂಟರ್ ಹಾಗೂ ಚಿನ್ನಾಭರಣಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.ಇವುಗಳ ಅಂದಾಜು ಮೌಲ್ಯ 2,50,000 ರೂ.
ಆರೋಪಿ ಹಬೀಬ್ ಹಸನ್ ಯಾನೆ ಹಬ್ಬಿ ಯಾನೆ ಚೆಂಬುಗುಡ್ಡೆ ಹಬ್ಬಿ ವಿರುದ್ಧ ದಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈವರೆಗೆ 42 ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಈತ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಇದ್ದ ಕಾರಣ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ 2 ದಸ್ತಗಿರಿ ವಾರೆಂಟ್, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್, ಉಳ್ಳಾಲ ಪೊಲೀಸ್ ಠಾಣೆಯಲ್ಲಿ 5 ದಸ್ತಗಿರಿ ವಾರೆಂಟ್, ಮೂಲ್ಕಿ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್, ಕೊಣಾಜೆ ಪೊಲೀಸ್ ಠಾಣೆಯಲ್ಲಿ 2 ದಸ್ತಗಿರಿ ವಾರೆಂಟ್, ಬಟ್ಟೆ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್ ಮತ್ತು ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ದಸ್ತಗಿರಿ ವಾರೆಂಟ್ಗಳಿದ್ದು, ಒಟ್ಟು 15 ದಸ್ತಗಿರಿ ವಾರಂಟ್ ನ್ಯಾಯಾಲಯದಿಂದ ಹೊರಡಿಸಲಾಗಿದೆ.