ಖತರ್ನಾಕ್ ಮನೆಗಳ್ಳ ಬೆಂಕಿ ನಂದೀಶ ಅಂದರ್

H22 Manegalla
Published on

ಹುಬ್ಬಳ್ಳಿ: ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ವ್ಯಕ್ತಿಯನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿ, 8,84,000 ರೂ. ಮೌಲ್ಯದ 175.5 ಗ್ರಾಂ ಚಿನ್ನಾಭರಣ ಹಾಗೂ 160 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಇಂದ್ರಪ್ರಸ್ಥ ನಗರ ನಿವಾಸಿ ಬೆಂಕಿ ನಂದೀಶ ಉಮೇಶ ಸಕ್ರಪ್ಪನವರ (25) ಬಂಧಿತ. ಮನೆಗಳ್ಳತನವನ್ನೇ ಕಸುಬಾಗಿಸಿಕೊಂಡಿದ್ದ ನಂದೀಶ ರಾತ್ರಿ ಹೊತ್ತು ನಗರದಲ್ಲಿ ಜನರ ಕಣ್ತಪ್ಪಿಸಿ ಓಡಾಡುತ್ತಿದ್ದ. ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಬ್ಬಿಣದ ರಾಡ್​ನಿಂದ ಕೀಲಿ ಮುರಿದು ಕಳ್ಳತನ ಮಾಡುತ್ತಿದ್ದ.

ಹಳೇ ಹುಬ್ಬಳ್ಳಿ ಠಾಣೆ ಇನ್ಸ್​ಪೆಕ್ಟರ್ ಎಸ್.ಬಿ. ಮಾಳಗೊಂಡ, ಎಸ್.ಎಸ್. ಕಮತಗಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪಿಎಸ್​ಐಗಳಾದ ಎಸ್.ಬಿ. ಸಿಂಗೆ, ಬಿ.ಎಚ್. ಕಿತ್ತೂರ, ಎಎಸ್​ಐ ಎಸ್.ಎಸ್. ದೊಡ್ಡಮನಿ, ಸಿಬ್ಬಂದಿ ಪಿ.ಜಿ. ಪುರಾಣಿಕಮಠ, ಬಿ.ಆರ್. ಮುದೇನಗುಡಿ, ಎನ್.ಎಂ. ಪಾಟೀಲ, ಸಿ.ಎಫ್. ಅಂಬಿಗೇರ, ಎಂ.ಬಿ. ಭಜಂತ್ರಿ, ಎಸ್.ಟಿ. ಗೊಡಚಪ್ಪನವರ, ವ್ಹಿ.ಎಸ್. ಗುಡಗೇರಿ, ಕೆ.ಎನ್. ಮೋಟೆಬೆನ್ನೂರ, ಎಂ.ಬಿ. ಪಾಟೀಲ, ಎಸ್.ಬಿ. ದುಂಡಪ್ಪನವರ, ಸಿ.ಸಿ. ಹಿರೇಮಠ ಮತ್ತು ಸಿ.ಎಸ್. ಕಾಬಡಗಿ ತಂಡದಲ್ಲಿದ್ದರು. ಈ ತಂಡಕ್ಕೆ ಆಯುಕ್ತರು ಬಹುಮಾನ ಘೊಷಿಸಿದ್ದಾರೆ.

ಜೈಲಿಗೆ ಹೋಗಿ ಬಂದಿದ್ದ: ನಂದೀಶ ಭಾರತ ನಗರ, ಇಂದ್ರಪ್ರಸ್ಥನಗರ ಹಾಗೂ ಫತೇಶಾವಲಿ ನಗರದ 6 ಮನೆಗಳಲ್ಲಿ ಕಳ್ಳತನ ಮಾಡಿದ್ದ. ಈತನ ವಿರುದ್ಧ ಈ ಹಿಂದೆ ಕೇಶ್ವಾಪುರ, ವಿದ್ಯಾನಗರ ಹಾಗೂ ಅಶೋಕನಗರ ಪೊಲೀಸ್ ಠಾಣೆಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಜೈಲಿಗೂ ಹೋಗಿ ಬಂದಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net