More

    ಗಡಿಯಲ್ಲಿ ದ್ವಿಗುಣವಾದ ಚೀನಾ ವೈಮಾನಿಕ ವ್ಯವಸ್ಥೆ

    ನವದೆಹಲಿ: ಭಾರತದ ಗಡಿಯುದ್ದಕ್ಕೂ ಚೀನಾ ಕಳೆದ ಮೂರು ವರ್ಷಗಳಲ್ಲಿ ತನ್ನ ವೈಮಾನಿಕ ಬಲವನ್ನು ದುಪ್ಪಟ್ಟುಗೊಳಿಸಿ ಕೊಂಡಿದೆ. ಪ್ರಸಕ್ತ ಗಡಿ ಬಿಕ್ಕಟ್ಟು ಪೂರ್ವಯೋಜಿತ ಬೆಳವಣಿಗೆಯಾಗಿರಬಹುದು ಎನ್ನುವುದಕ್ಕೆ ಈ ಅಂಶ ಮಹತ್ವದ ಸಾಕ್ಷಿಯಾಗಿದೆ. ವೇದಿಕೆ ಸಿದ್ಧಪಡಿಸಿಕೊಂಡೇ ಅದು ಗಡಿಯಲ್ಲಿ ಕಾಲು ಕೆರೆದು ನಿಂತಿರುವುದು ಈಗ ಬಯಲಾಗಿದೆ. ವಾಯು ನೆಲೆಗಳು, ವೈಮಾನಿಕ ರಕ್ಷಣೆ ಸೌಲಭ್ಯ ಮತ್ತು ಹೆಲಿಪೋರ್ಟ್​ಗಳನ್ನು (ಹೆಲಿಪ್ಯಾಡ್) ಚೀನಾ ಹೆಚ್ಚಿಸಿದೆ.

    ಗಡಿಯಲ್ಲಿ ಸಂಪೂರ್ಣವಾಗಿ ಹೊಸ ಮಿಲಿಟರಿ ನೆಲೆಗಳನ್ನು ನಿರ್ವಿುಸಲು ಕಾಮಗಾರಿ ಆರಂಭಿಸಿರುವುದು ಕಳವಳದ ವಿಷಯವಾಗಿದೆ. ‘2017ರ ಡೋಕ್ಲಾಂ ಬಿಕ್ಕಟ್ಟಿನ ನಂತರ ಚೀನಾದ ವ್ಯೂಹಾತ್ಮಕ ಉದ್ದೇಶಗಳು ಸಂಪೂರ್ಣವಾಗಿ ಬದಲಾದಂತೆ ಕಾಣುತ್ತದೆ. ಭಾರತದ ಸರಹದ್ದಿನಲ್ಲಿ ಮಿಲಿಟರಿ ಮೂಲ ಸೌಕರ್ಯಗಳನ್ನು ಹೆಚ್ಚಿಸಿರುವುದೇ ಈ ಗುಮಾನಿಗೆ ಕಾರಣವಾಗಿದೆ. ಭೌಗೋಳಿಕ- ರಾಜಕೀಯ ಬೇಹುಗಾರಿಕೆ ವೇದಿಕೆ ‘ಸ್ಟಾರ್ಟ್ ಫಾರ್’ ಈ ಎಲ್ಲ ಮಾಹಿತಿಗಳನ್ನು ಕಲೆ ಹಾಕಿದ್ದು ಈ ಕುರಿತ ಸಮಗ್ರ ವರದಿ ಬಿಡುಗಡೆಯಾಗುವ ಹಂತದಲ್ಲಿದೆ. ಭಾರತದ ಭದ್ರತೆ ಮೇಲೆ ನೇರ ಪರಿಣಾಮ ಬೀರಬಹುದಾದ ಮಿಲಿಟರಿ ಸೌಲಭ್ಯಗಳ ಉಪಗ್ರಹ ಚಿತ್ರಗಳನ್ನು ಆಧರಿಸಿ ಸ್ಟಾರ್ಟ್​ಫಾರ್ ಈ ವರದಿಯನ್ನು ಸಿದ್ಧಪಡಿಸಿದೆ. ಪೂರ್ವ ಲಡಾಖ್​ನಲ್ಲಿನ ವಿದ್ಯಮಾನಗಳಿಗೂ ಚೀನಿ ಕ್ರಮಗಳಿಗೂ ತಾಳೆ ಹಾಕಿದರೆ ಈ ಅನುಮಾನ ಬಲವಾಗುತ್ತದೆ ಎಂದು ಸ್ಟಾರ್ಟ್​ಫಾರ್​ನ ಹಿರಿಯ ಜಾಗತಿಕ ವಿಶ್ಲೇಷಣೆಕಾರ ಸಿಮ್್ಯಾಕ್ ಹೇಳಿದ್ದಾರೆ.

    ಗಡಿ ಪ್ರದೇಶಗಳ ಮೇಲಿನ ತನ್ನ ನಿಯಂತ್ರಣ ವನ್ನು ದೃಢಪಡಿಸುವ ತನ್ನ ವಿಸõತ ಪ್ರಯತ್ನಗಳ ಭಾಗವಾಗಿ ಸರಹದ್ದಿನಲ್ಲಿ ಮಿಲಿಟರಿ ನೆಲೆಗಳನ್ನು ಗಟ್ಟಿಗೊಳಿ ಸಲು ಚೀನಾ ಮುಂದಾಗಿರಬಹುದು

    | ಸಿಮ್್ಯಾಕ್ ಸ್ಟಾರ್ಟ್ ಫಾರ್​ನ ಹಿರಿಯ ಜಾಗತಿಕ ವಿಶ್ಲೇಷಣೆಕಾರ

    ನೇಪಾಳದ ಭೂಮಿಯೂ ಒತ್ತುವರಿ

    ನೇಪಾಳ-ಚೀನಾ ಗಡಿಯಲ್ಲಿರುವ ನೇಪಾಳದ ಹುಮ್ಲಾ ಜಿಲ್ಲೆಯಲ್ಲಿ ಚೀನಾ ಜಮೀನು ಒತ್ತುವರಿ ಮಾಡಿಕೊಂಡು ಕನಿಷ್ಠ ಒಂಬತ್ತು ಕಟ್ಟಡಗಳನ್ನು ನಿರ್ವಿುಸಿದ್ದು ಸ್ಥಳೀಯ ಜನರ ಭೇಟಿಗೆ ಅವಕಾಶ ನೀಡದಿರುವುದು ಬೆಳಕಿಗೆ ಬಂದಿದೆ. ಗಡಿಯಿಂದ ಎರಡು ಕಿ.ಮೀ. ಪರಿಧಿಯ ಲಪ್ಚಾ-ಲಿಮಿ ಪ್ರದೇಶದ ನಮ್ಖಾ ಗಾವ್​ಪಾಲಿಕಾ (ಗ್ರಾಮೀಣ ಸ್ಥಳೀಯ ಸಂಸ್ಥೆ) ವ್ಯಾಪ್ತಿಯಲ್ಲಿ ಎರಡು ತಿಂಗಳ ಹಿಂದೆಯೇ ಅತಿಕ್ರಮಣ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಕಟ್ಟಡಗಳಿರುವ ಆ ಪ್ರದೇಶಕ್ಕೆ ಭೇಟಿ ನೀಡಲು ನಮ್ಖಾ ನಗರಸಭೆಯ ಅಧ್ಯಕ್ಷ ವಿಷ್ಣು ಬಹಾದೂರ್ ಲಾಮಾ ಮತ್ತು ಸ್ಥಳೀಯ ಜನರಿಗೆ ಚೀನಾ ಯೋಧರು ಅನುಮತಿ ನೀಡುತ್ತಿಲ್ಲ ಎನ್ನಲಾಗಿದೆ. ಈ ವಿಚಾರವನ್ನು ಲಾಮಾ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಜಿಲ್ಲಾಡಳಿತ ರಚಿಸಿದ ತಂಡವೊಂದು ಆಗಸ್ಟ್ 30ರಿಂದ ಸೆಪ್ಟೆಂಬರ್ 9ರ ನಡುವೆ ಅಲ್ಲಿಗೆ ಭೇಟಿ ನೀಡಿ ನೇಪಾಳದ ಗೃಹ ಹಾಗೂ ವಿದೇಶಾಂಗ ಸಚಿವಾಲಯಗಳಿಗೆ ವರದಿ ಸಲ್ಲಿಸಿದೆ. ಲಪ್ಚಾ-ಲಿಮಿ ಪ್ರದೇಶದಲ್ಲಿ ಚೀನಾ ಅನೇಕ ವರ್ಷಗಳಿಂದ ಅತಿಕ್ರಮಣ ನಡೆಸುತ್ತಿದೆ. ಈ ಸ್ಥಳವು ಟಿಬೆಟ್ ಸ್ವಾಯತ್ತ ಪ್ರದೇಶದ ಗಡಿಯಲ್ಲಿದ್ದು ಕೈಲಾಸ ಮಾನಸ ಸರೋವರವನ್ನು ಇಲ್ಲಿಂದ ಸ್ಪಷ್ಟವಾಗಿ ಕಾಣಬಹುದಾಗಿದೆ.

    ಪೂರ್ಣಗೊಳ್ಳದ ಪ್ರಕ್ರಿಯೆ

    ಗಡಿ ಭಾಗಗಳಲ್ಲಿ ಚೀನಾದ ಮಿಲಿಟರಿ ಸೌಲಭ್ಯಗಳ ಉನ್ನತೀಕರಣ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎನ್ನುವುದೂ ಗಮನಾರ್ಹ. ವಿಸ್ತರಣೆ ಮತ್ತು ಹೊಸ ನಿರ್ಮಾಣ ಕಾರ್ಯಗಳು ಇನ್ನೂ ನಡೆಯುತ್ತಲೇ ಇವೆ. ಇದು ಭಾರತದೊಂದಿಗಿನ ಪ್ರಸಕ್ತ ಬಿಕ್ಕಟ್ಟನ್ನು ಇನ್ನೂ ದೀರ್ಘ ಕಾಲ ಮುಂದುವರಿಸುವ ಉದ್ದೇಶ ಹೊಂದಿರುವುದರ ಸಂಕೇತವಾಗಿದೆ ಎಂದು ಸ್ಟಾರ್​ಫಾರ್​ವರದಿ ಆತಂಕ ವ್ಯಕ್ತಪಡಿಸಿದೆ. ಮೇ ತಿಂಗಳಲ್ಲಿ ಆರಂಭ ವಾದ ಪ್ರಸಕ್ತ ಬಿಕ್ಕಟ್ಟು ಕೊನೆಗೊಂಡರೂ ಈ ಎಲ್ಲ ಮೂಲ ಸೌಕರ್ಯಗಳು ಭವಿಷ್ಯದಲ್ಲಿ ಚೀನಾದ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲು ಬೆಂಬಲ ಒದಗಿಸಲಿವೆ ಎಂದು ವಿಶ್ಲೇಷಿಸಲಾಗಿದೆ.

    ಹೆಚ್ಚುವರಿ ಪಡೆ ರವಾನೆ ಇಲ್ಲ

    ಪೂರ್ವ ಲಡಾಖ್​ನ ವಾಸ್ತವ ಗಡಿ ರೇಖೆ (ಎಲ್​ಎಸಿ) ಉದ್ದಕ್ಕೂ ಪರಿಸ್ಥಿತಿ ಸ್ಥಿರಗೊಳಿಸುವ ಕುರಿತು ಚೀನಾ ಮತ್ತು ಭಾರತದ ಪಡೆಗಳು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿವೆ. ಗಡಿಗೆ ಹೆಚ್ಚುವರಿ ಪಡೆಯನ್ನು ರವಾನಿಸುವುದಿಲ್ಲ ಎಂಬುದಕ್ಕೆ ಸಮ್ಮತಿಸಿವೆ. ಪರಿಸ್ಥಿತಿ ಸುಧಾರಿಸಲು ಒಮ್ಮತಕ್ಕೆ ಬಂದಿರುವ ಅಂಶಗಳನ್ನು ಕಾರ್ಯಗತಗೊಳಿಸಲು, ಮಿಲಿಟರಿ ಸಂವಹನವನ್ನು ಬಲಪಡಿಸಲು ಹಾಗೂ ತಪು್ಪಗ್ರಹಿಕೆಯನ್ನು ತಪ್ಪಿಸಲು ಎರಡೂ ಕಡೆಯ ನಿಯೋಗ ಒಪ್ಪಿವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಚೀನಾ ಭಾಗದಲ್ಲಿರುವ ಮಾಲ್ಡೊದಲ್ಲಿ 6ನೇ ಸುತ್ತಿನ ಮಾತುಕತೆಯು 14 ತಾಸು ನಡೆಯಿತು. ಬೆಳಿಗ್ಗೆ 9 ಗಂಟೆಗೆ ಆರಂಭವಾದ ಸಭೆ ರಾತ್ರಿ 11 ಗಂಟೆಗೆ ಮುಗಿದಿದೆ. ಎರಡೂ ಕಡೆಗಳವರ ಒಂದೊಂದು ಮಾತನ್ನೂ ತರ್ಜುಮೆ ಮಾಡಬೇಕಾಗುವುದರಿಂದ ಮಾತುಕತೆ ಬಹಳ ದೀರ್ಘವಾಯಿತು. ಐದನೇ ಸುತ್ತಿನ ಚರ್ಚೆ 11 ಗಂಟೆ ಹಾಗೂ ನಾಲ್ಕನೇ ಸುತ್ತಿನ ಮಾತುಕತೆ 15 ಗಂಟೆಯಷ್ಟು ದೀರ್ಘವಾಗಿತ್ತು.

    ಏನೇನು ಸೌಲಭ್ಯ?

    • ಒಟ್ಟು 13 ಹೊಸ ಮಿಲಿಟರಿ ಸೌಲಭ್ಯಗಳು.
    • ಮೂರು ವಾಯು ನೆಲೆಗಳು.
    • ಐದು ಕಾಯಂ ವಾಯು ರಕ್ಷಣಾ ವ್ಯವಸ್ಥೆಗಳು.
    • ಐದು ಹೆಲಿಪೋರ್ಟ್​ಗಳು.
    • ಲಡಾಖ್ ಬಿಕ್ಕಟ್ಟು ಆರಂಭವಾದ ನಂತರ ನಾಲ್ಕು ಹೆಲಿಪೋರ್ಟ್​ಗಳ ನಿರ್ಮಾಣ ಆರಂಭ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts