ಬಿಡದಿ: ಬೈರಮಂಗಲ ಕೆರೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿಕೊಂಡ ಘಟನೆ ಶನಿವಾರ ನಡೆದಿದೆ. ಕೆರೆಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಬಂದ ಹೊಗೆ ಅಕ್ಕ ಪಕ್ಕದ ಗ್ರಾಮಗಳಿಗೂ ವ್ಯಾಪಿಸಿ ಆತಂಕದ ಮನೆ ಮಾಡಿತ್ತು.
ಬೆಂಗಳೂರಿನಿಂದ ವೃಷಭಾವತಿ ನದಿ ಮೂಲಕ ನೀರು ಹಾಗೂ ತ್ಯಾಜ್ಯ ವಸ್ತುಗಳು ಬಂದು ಬೈರಮಂಗಲ ಕೆರೆ ಸೇರುತ್ತಿದೆ. ಇದರಿಂದಾಗಿ ಕಸದ ರಾಶಿ ಕೂಡ ಹೆಚ್ಚಾಗಿ ಕಸ ಶೇಖರಣೆ ಆಗಿತ್ತು. ಶನಿವಾರ ಮಧ್ಯಾಹ್ನ ಕೆರೆಯ ಮದ್ಯ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ನೋಡ ನೋಡುತ್ತಿದಂತೆ ಆವರಿಸಿತ್ತು. ಬೆಂಕಿಯ ಜೊತೆಗೆ ದಟ್ಟ ಹೊಗೆ ಕೂಡ ಕಾಣಿಸಿಕೊಂಡಿತ್ತು.
ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಹೆಚ್ಚಾದ ಕಾರಣದಿಂದಾಗಿ ಪಕ್ಕದ ತಿಮ್ಮೇಗೌಡನದೊಡ್ಡಿ, ಬೈರಮಂಗಲ ಗ್ರಾಮಗಳಿಗು ಹೊಗೆ ವ್ಯಾಪಿಸಿತ್ತು. ಬಿಡದಿಯಿಂದ ಹಾರೋಹಳ್ಳಿಗೆ ಹೋಗುವ ರಸ್ತೆಯಲ್ಲು ಸಹ ಹೊಗೆ ಕಾಣಿಸಿಕೊಂಡ ಕಾರಣದಿಂದಾಗಿ ವಾಹನಗಳ ಸಂಚಾರಕ್ಕು ಸ್ವಲ್ಪ ಸಮಯ ಅಡಚಣೆ ಉಂಟಾಯಿತು.
ಬೆಂಗಳೂರಿನಿಂದ ನೀರಿನ ಜೊತೆಗೆ ಬರುವ ಪ್ಲಾಸ್ಟಿಕ್ ಸೇರಿದಂತೆ ಇತರೆ ವಸ್ತುಗಳು ಕೆರೆಗೆ ಬಂದು ಕರೆಯ ದಡದಲ್ಲಿ ಶೇಖರಣೆ ಆಗುತ್ತದೆ. ಈ ಕಸ ಜಾಸ್ತಿಯಾಗಿತ್ತು ಕೆರೆ ದಡದಲ್ಲಿ ಕುರು ಎಮ್ಮೆ ಮೇಯಿಸುವ ಮಂದಿ ಕಸಕ್ಕೆ ಬೆಂಕಿ ಹಾಕಿರಬಹುದೆಂದು ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ವಾಹನ: ಕೆರೆಯಲ್ಲಿ ಬೆಂಕಿ ಕಾಣಸಿಕೊಂಡ ಕಾರಣ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದರು. ಕೆರೆಯಲ್ಲಿ ಆವರಿಸಿಕೊಂಡಿದ್ದ ಬೆಂಕಿಯನ್ನ ನಂದಿಸುವ ಕೆಲಸ ಮಾಡಿದರು. ಬೆಂಕಿ ಕಡಿಮೆ ಆಗಿತ್ತಿದ್ದಂತೆ ಆವರಿಸಿದ್ದ ಹೊಗೆಯು ಸಹ ಕಡಿಮೆ ಆಯಿತು.