

ಬೆಂಗಳೂರು: ಇವರಿಬ್ಬರು ವಿಮಾನದಲ್ಲೇ ಬಂದಿಳಿಯುತ್ತಿದ್ದರು, ಲಾಡ್ಜ್ನಲ್ಲೇ ತಂಗುತ್ತಿದ್ದರು. ಮಾತ್ರವಲ್ಲ ಸುಲಭದಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿದ್ದರು. ಆದರೆ ಇವರು ಮಾಡುತ್ತಿದ್ದುದು ಏನು ಅಂತ ಗೊತ್ತಾಗಿದ್ದು ಮಾತ್ರ ಇವರು ಸಿಕ್ಕಿಬಿದ್ದ ಮೇಲೆಯೇ..!
ಹೌದು.. ಉತ್ತರ ಭಾರತದ ಮೂಲದ ಇಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಮರ್ಜಿತ್ ಸಿಂಗ್ ಮತ್ತು ರಾಜ್ಕುಮಾರ್ ಬಂಧಿತ ಆರೋಪಿಗಳು. ಇವರಿಬ್ಬರನ್ನು ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಾಗಿರುವ ಈ ಆರೋಪಿಗಳು ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದು, ಓಯೊ ಆ್ಯಪ್ ಮೂಲಕ ಲಾಡ್ಜ್ನಲ್ಲಿ ನೆಲೆಸುತ್ತಿದ್ದರು. ಬಳಿಕ ನಗರದಲ್ಲಿನ ಎಟಿಎಮ್ಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ಗ್ಯಾಸ್ ಕಟ್ಟರ್ ಬಳಸಿ ಕಳ್ಳತನ ನಡೆಸುತ್ತಿದ್ದ ಇವರು ಇತ್ತೀಚೆಗೆ ಬೆಂಗಳೂರಿನ ಉತ್ತರಹಳ್ಳಿಯ ಕೆನರಾ ಬ್ಯಾಂಕ್ ಎಟಿಎಮ್ಗೆ ಕನ್ನ ಹಾಕಿ 17 ಲಕ್ಷ ರೂ. ಎಗರಿಸಿದ್ದರು.
ಬಂಧಿತರ ವಿರುದ್ಧ ಬ್ಯಾಟರಾಯನಪುರ, ಪೀಣ್ಯ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು, ಸದ್ಯ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಇವರಿಬ್ಬರನ್ನು ಪೊಲೀಸರು ಮತ್ತಷ್ಟು ವಿಚಾರಣೆಗೆ ಒಳಪಡಿಸುತ್ತಿದ್ದು, ಇನ್ನಷ್ಟು ಮಾಹಿತಿ ಸದ್ಯದಲ್ಲೇ ಹೊರಬೀಳುವ ಸಾಧ್ಯತೆ ಇದೆ.