

ಕೊಕಟನೂರ (ಬೆಳಗಾವಿ): ನದಿಯಲ್ಲಿ ತೇಲಿ ಬಂದ ಶವದಲ್ಲಿ ಏನಿರುತ್ತೆ? ದೇಹದ ಮೇಲೆ ಗಾಯದ ಕಲೆ, ಜಲಚರವಾಸಿಗಳು ಕಚ್ಚಿ ತಿಂದಿರುವ ಗುರುತು, ಮೈಮೇಲಿನ ಬಟ್ಟೆ, ಹೆಚ್ಚೆಂದರೆ ಸಣ್ಣಪುಟ್ಟ ಆಭರಗಳು ಇರಬಹುದಷ್ಟೆ. ಆದರಿಲ್ಲೊಂದು ಶವದ ಜತೆಗೆ ಬರೋಬ್ಬರಿ ಒಂದೂವರೆ ಕೆಜಿ ಗಟ್ಟಿ ಚಿನ್ನ ಸಿಕ್ಕಿದೆ!
ಹೌದು, ಅಥಣಿ ತಾಲೂಕಿನ ಅವರಖೋಡ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು, ಅದರೊಂದಿಗೆ ಒಂದೂವರೆ ಕೆಜಿ ಬಂಗಾರ ಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಮಿರಜ ತಾಲೂಕಿನ ಪಾಟಗಾಂವ ಗ್ರಾಮದ ಸಾಗರ ಪಾಟೀಲ(30)ನ ಶವ ಅ.4ರಂದು ಅವರಖೋಡ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ತೇಲಿ ಬರುತ್ತಿತ್ತು. ಇದನ್ನು ಕಂಡ ಸ್ಥಳೀಯರು ಅಥಣಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಶವದೊಂದಿಗೆ 1.5 ಕೆ.ಜಿ ಗಟ್ಟಿ ಬಂಗಾರವೂ ದೊರೆತಿದೆ. ಶವದ ಮೇಲೆ ಗಾಯದ ಗುರುತು ಕಂಡುಬಂದಿದೆ. ಶವವನ್ನು ಕುಟುಬಂಸ್ಥರಿಗೆ ಹಸ್ತಾಂತರಿಸಿದ್ದು, ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಥಣಿ ಸಿಪಿಐ ಶಂಕರಗೌಡ ಬಸನಗೌಡರ, ಪಿಎಸ್ಐ ಕುಮಾರ ಹಾಡಕಾರ, ತನಿಖಾ ಸಹಾಯಕ ಲಕ್ಷ್ಮಣ ಅಜ್ಜಣಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.