

ಬೆಂಗಳೂರು: ವಸತಿ ಹಾಗೂ ವಸತಿಯೇತರ ಪ್ರದೇಶಗಳಲ್ಲಿ ವಾಹನ ನಿಲುಗಡೆ ಮತ್ತು ಕಸ ಸಂಗ್ರಹಕ್ಕೆ ಶುಲ್ಕ ವಸೂಲಿ ಕುರಿತು ಸ್ಪಷ್ಟನೆ ನೀಡುವ ಮೂಲಕ ಬಿಬಿಎಂಪಿ, ಸಾರ್ವಜನಿಕರ ಆಕ್ರೋಶವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದೆ.
ಸರ್ಕಾರದ ಸೂಚನೆ ಮೇರೆಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬುಧವಾರ ಏಕಾಏಕಿ ಸುದ್ದಿಗೋಷ್ಠಿ ನಡೆಸಿ ವಾಹನ ನಿಲುಗಡೆ ಮತ್ತು ಕಸ ಸಂಗ್ರಹಿಸಲು ವಿಧಿಸಿರುವ ಶುಲ್ಕದ ಗೊಂದಲಗಳಿಗೆ ತೆರೆ ಎಳೆಯುವ ಕಾರ್ಯ ಮಾಡಿದರು.
ಪಾರ್ಕಿಂಗ್ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ವಿಧಿಸುವ ಕುರಿತು ಹೊರಡಿಸಿರುವ ಕರಡು ಅಧಿಸೂಚನೆಗೆ ಸಾರ್ವಜನಿಕರಿಂದ ಆಕ್ಷೇಪಣೆ ವ್ಯಕ್ತವಾದರೆ ನಗರದಲ್ಲಿ "ಪಾರ್ಕಿಂಗ್ ಪಾಲಿಸಿ' ತಂದು ಏಕರೂಪ ವಾಹನ ಶುಲ್ಕ ವಿಧಿಸಲಾಗುವುದು. ಹಿಂದೆ ಪಾರ್ಕಿಂಗ್ ಪ್ರದೇಶಕ್ಕೆ ಶೇ.50 ಶುಲ್ಕ ಮಾತ್ರ ಪಡೆಯಲಾಗುತ್ತಿತ್ತು. ವಲಯಗಳಲ್ಲಿ ವಿಭಿನ್ನ ದರ ನಿಗದಿಪಡಿಸಲಾಗಿತ್ತು. ವಾಹನ ನಿಲುಗಡೆ ಶುಲ್ಕ ಕಡಿಮೆ ಮಾಡಿದ್ದ ಪರಿಣಾಮ 2024-25ರಲ್ಲಿ 211 ಕೋಟಿ ರೂ. ಸಂಗ್ರಹವಾಗಿದ್ದ ಆದಾಯವು ಈ ವರ್ಷ 171 ಕೋಟಿ ರೂ.ಗೆ ಇಳಿಕೆಯಾಗಿ 40 ಕೋಟಿ ರೂ. ಆದಾಯ ನಷ್ಟವಾಗಿದೆ.ಆದರೂ, ಪಾರ್ಕಿಂಗ್ ಶುಲ್ಕದ ಕುರಿತು ಸಾರ್ವಜನಿಕರಿಗೆ ತಪು$್ಪ ಮಾಹಿತಿ ಹೋಗುತ್ತಿದೆ ಎಂದು ತುಷಾರ್ ಗಿರಿನಾಥ್ ಬೇಸರ ವ್ಯಕ್ತಪಡಿಸಿದರು.
ವಸತಿಯೇತರ ಪ್ರದೇಶಗಳಲ್ಲಿ 35 ಕೋಟಿ ರೂ., ವಸತಿ ಪ್ರದೇಶಗಳಲ್ಲಿ 5 ಕೋಟಿ ರೂ.ಪಾರ್ಕಿಂಗ್ ಆದಾಯ ಕಡಿಮೆಯಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪಾರ್ಕಿಂಗ್ ಶುಲ್ಕವನ್ನು ಕಡಿಮೆ ಮಾಡುವುದಕ್ಕೆ ಹೊರಟಿದ್ದೇವೆ. ಎಲ್ಲ ವಯಲಗಳಲ್ಲೂ ಏಕ ರೂಪ ಶುಲ್ಕ ಇರಬೇಕೆಂದು ಮಾರ್ಗಸೂಚಿ ಹೊರಡಿಸಿದ್ದೇವೆ. ಈ ಬಗ್ಗೆ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಸಾರ್ವಜನಿಕರಿಂದ ವ್ಯಕ್ತವಾಗುವ ಆಕ್ಷೇಪಗಳನ್ನು ಸ್ವೀಕರಿಸಿ "ಪಾರ್ಕಿಂಗ್ ಪಾಲಿಸಿ' ಮಾಡುತ್ತೇವೆ. ಬಳಿಕ ಏಕರೂಪ ಪಾರ್ಕಿಂಗ್ ಶುಲ್ಕ ವಿಧಿಸಲಾಗುವುದು. ವಸತಿಯೇತರ ಪ್ರದೇಶಗಳ ಶುಲ್ಕದಲ್ಲೂ ಕಡಿಮೆ ಮಾಡಲಾಗಿದೆ. ವಾಹನ ನಿಲುಗಡೆ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿ ಬೇರೆ ಉದ್ದೇಶಕ್ಕೆ ಬಳಸಿಕೊಂಡರೆ ಅದರ ಮೇಲೆ ತೆರಿಗೆ ಹಾಕುತ್ತೇವೆ ಎಂದು ತುಷಾರ್ ಗಿರಿನಾಥ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನಿಶ್ ಮೌದ್ಗಿಲ್ ಇದ್ದರು.
ಬೈಲಾದಲ್ಲಿ ಕಸದ ಸೆಸ್ ನಮೂದು: ಕಸ ಸಂಗ್ರಹಕ್ಕೆ ತೆರಿಗೆ ಸಂಗ್ರಹಿಸುವ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. 1987ರ ಪರಿಸರ ಸಂರಣೆ ಕಾಯ್ದೆಯಲ್ಲಿ ಬೈಲಾ ಇದೆ. 2020ರಲ್ಲಿ ಬಿಬಿಎಂಪಿಯಲ್ಲಿ ಬೈಲಾ ಮಾಡಲಾಗಿದೆ. 2020ರಿಂದ 2025ರವರೆಗೆ ಬೈಲಾವನ್ನು ಜಾರಿಗೆ ತಂದಿರಲಿಲ್ಲ. ಇದೀಗ ಸರ್ಕಾರ ತೀರ್ಮಾನ ತೆಗೆದುಕೊಂಡು ವಸತಿ ಪ್ರದೇಶಗಳಲ್ಲಿ ಕುಟುಂಬದ ಸದಸ್ಯರ ಆಧಾರದಲ್ಲಿ ಮತ್ತು ವಸತಿಯೇತರ ಪ್ರದೇಶಗಳಲ್ಲಿ ಬೇರೆ ಬೇರೆ ಶುಲ್ಕ ನಿಗದಿ ಮಾಡಲಾಗಿದೆ ಎಂದು ತುಷಾರ್ ಗಿರಿನಾಥ್ ಹೇಳಿದರು. ದೇಶದ ಬೇರೆ ರಾಜ್ಯ ಮತ್ತು ಸ್ಥಳಿಯ ಸಂಸ್ಥೆಗಳಲ್ಲಿ ಪ್ರತಿ ನಿತ್ಯ 1 ಅಥವಾ 2 ರೂ ಅಥವಾ ತಿಂಗಳಿಗೆ 30 ರೂ.ಕಸದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಪುಣೆ, ಮುಂಬೈ ಸೇರಿ ದೇಶದ ಹಲವೆಡೆ ಇದು ಚಾಲ್ತಿಯಲ್ಲಿದೆ. ಸರ್ಕಾರದಿಂದ ಅನುಮತಿ ಪಡೆದು ಇದನ್ನು ಅನುಷ್ಠಾನ ಮಾಡಿದ್ದೇವೆ. ವಸತಿ ಪ್ರದೇಶಗಳಲ್ಲಿ ಬೈಲಾಗಿಂತ ಶೇ.50 ಕಡಿಮೆ ತೆರಿಗೆ ವಿಧಿಸಲಾಗುತ್ತಿದೆ.ಕಸದ ಶುಲ್ಕ ಸಂಗ್ರಹದಿಂದ ಕಸ ವಿಲೇವಾರಿ ನಿರ್ವಹಣೆ ಮಾಡಲಾಗುವುದು ಎಂದರು.