ಶಾಶ್ವತ ನೀರಾವರಿ ಹೋರಾಟಕ್ಕಿಲ್ಲ ಇಚ್ಛಾಶಕ್ತಿ

There is no willpower to fight for permanent irrigation
13CBP4
Published on

ಜನಪ್ರತಿನಿಧಿಗಳ ಧೋರಣೆಗೆ ಅಸಮಾಧಾನ-ಮೂರು ಜಿಲ್ಲೆಗಳ 15 ಶಾಸಕರ ಪೈಕಿ ಒಬ್ಬರಷ್ಟೇ ಹಾಜರಿ


ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಮುಂಬರುವ ಅಧಿವೇಶನದಲ್ಲಿ ಶಾಶ್ವತ ನೀರಾವರಿ ಸೌಲಭ್ಯದ ಅಗತ್ಯತೆ ಬಗ್ಗೆ ಗಮನ ಸೆಳೆಯುವ ಬಗ್ಗೆ ಚರ್ಚಿಸಲು ಹೋರಾಟಗಾರರು ಆಹ್ವಾನಿಸಿದ್ದ ಮೂರು ಜಿಲ್ಲೆಗಳ ಶಾಸಕರ ಪೈಕಿ ಒಬ್ಬರು ಮಾತ್ರ ಹಾಜರಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳ ಧೋರಣೆಗೆ ಅಸಮಾಧಾನ ವ್ಯಕ್ತವಾಯಿತು.
ನಗರದ ಪತ್ರಕರ್ತರ ಭವನದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಶನಿವಾರ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಗೆ ಬಯಲುಸೀಮೆಯ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಎಲ್ಲ ಶಾಸಕರನ್ನು ಆಹ್ವಾನಿಸಲಾಗಿತ್ತು. ಈ ವ್ಯಾಪ್ತಿಯ 15 ಶಾಸಕರ ಪೈಕಿ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಮಾತ್ರ ಭಾಗವಹಿಸಿದ್ದರು. ಇದಕ್ಕೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.
ಈ ಭಾಗದ ಜನರ ದಾಹವನ್ನು ನೀಗಿಸುವ ಉದ್ದೇಶದಿಂದ ನೀರಾವರಿ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಹಲವು ದಶಕಗಳಿಂದಲೂ ಹೋರಾಟ ನಡೆಸಲಾಗುತ್ತಿದೆ. ಇದಕ್ಕೆ ಜನಪ್ರತಿನಿಧಿಗಳು ಸುಳ್ಳು ನೆಪ ಹೇಳಿ, ಅಪ್ರಯೋಜನಕಾರಿ ಯೋಜನೆಗಳ ಹೆಸರಿನಲ್ಲಿ ಕಾಲಹರಣದಲ್ಲಿ ತೊಡಗಿದ್ದು, ಸರ್ಕಾರಗಳು ನಿರಂತರವಾಗಿ ಜನರನ್ನು ಯಾಮಾರಿಸುತ್ತಿವೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಕಿಡಿಕಾರಿದರು.
ನೀರಾವರಿ ತಜ್ಞ ಪರಮಶಿವಯ್ಯ ಬಯಲುಸೀಮೆ ಭಾಗದ ಜಿಲ್ಲೆಗೆ ಅನುಕೂಲಕರವಾದ ವೈಜ್ಞಾನಿಕ ಯೋಜನೆಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಅದನ್ನು ಪರಿಗಣಿಸುತ್ತಿಲ್ಲ. ಬದಲಿಗೆ ನೀರು ಬಾರದಿದ್ದರೂ ಹಣದ ಲಾಭದ ದೃಷ್ಟಿಯಲ್ಲಿ ಇತರ ಯೋಜನೆಗಳಿಗೆ ಮಣೆ ಹಾಕಲಾಗುತ್ತಿದೆ. ಎತ್ತಿನಹೊಳೆ ಯೋಜನೆಯ ನೀರು ಇನ್ನೂ ಈ ಭಾಗಕ್ಕೂ ಹರಿಸಿಲ್ಲ. ಆಗಲೇ ಕೋಟ್ಯಂತರ ರೂ. ಖರ್ಚಾಗಿದೆ. ಕೆ.ಸಿ.ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ಮೂರನೇ ಹಂತದ ಶುದ್ಧೀಕರಣದ ಬಗ್ಗೆಯೂ ನಿರ್ಲಕ್ಷ್ಯ ತೋರಲಾಗಿದೆ. ಇದಕ್ಕೆ ತಕ್ಕಪಾಠ ಕಲಿಸಲು ಸಂಘಟಿತ ಹೋರಾಟ ಅಗತ್ಯವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮುಖಂಡರಾದ ಎಸ್.ಲಕ್ಷ್ಮಯ್ಯ, ಸುಷ್ಮಾ ಶ್ರೀನಿವಾಸ್, ನಾರಾಯಣಸ್ವಾಮಿ, ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಶ್ರೀರಾಮೇಗೌಡ ಮತ್ತಿತರರು ಇದ್ದರು.


ಪ್ರಧಾನಿ ಬಳಿಗೆ ರೈತರ ನಿಯೋಗ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಳಿಗೆ ರೈತರ ನಿಯೋಗವನ್ನು ಕರೆದುಕೊಂಡು ಹೋಗಿ, ನೀರಾವರಿ ಸೌಲಭ್ಯದ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ತಿಳಿಸಿದರು. ಈಗಾಗಲೇ ಬಯಲುಸೀಮೆಯ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ವಿಧಾನಸಭಾ ಅಧಿವೇಶನದಲ್ಲಿ ಗಮನ ಸೆಳೆಯಲಾಗಿದೆ. ಎತ್ತಿನಹೊಳೆ ಯೋಜನೆ ಜಾರಿ ಕನಸಾ, ನಾನು ಎಸ್ಸೆಸ್ಸೆಲ್ಸಿಯಲ್ಲಿದ್ದಾಗ ಕಾಮಗಾರಿಗೆ ಚಾಲನೆ ನೀಡಲಾಯಿತು, ನನ್ನ ಮಗ ಎಸ್ಸೆಸ್ಸೆಲ್ಸಿಗೆ ಬಂದಾಗಲಾದರೂ ಕೆಲಸ ಮುಗಿಯುತ್ತಾ ಎಂದು ಪ್ರಶ್ನಿಸಿದ್ದೇನೆ ಎಂದರು.

ಕೃಷಿಯಲ್ಲಿ ತೊಡಗಲು ಭಯ
ವಾಲ್ಮೀಕಿ ನಿಗಮ, ಮುಡಾ ಹಗರಣ ಸೇರಿ ಏನೆಲ್ಲ ಅವ್ಯವಹಾರಗಳು ನಡೆಯುತ್ತಿವೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ. ಇದರ ನಡುವೆ ಸರ್ಕಾರದ ಮಟ್ಟದಲ್ಲಿ ಕೆಲವರು ರಾಜಕೀಯ ತೆವಲಿಗಾಗಿ ಹೇಳಿಕೆ ನೀಡುವ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಮೃದ್ಧಿ ಮಂಜುನಾಥ್ ಕಿಡಿಕಾರಿದರು. ಮುಂಬರುವ ಬಜೆಟ್‌ನಲ್ಲೂ ಕಾಟಾಚಾರಕ್ಕೆ ನೀರಾವರಿ ಯೋಜನೆಗೆ ಹಣ ಮೀಸಲಿಡುವಂತಹ ನಿರೀಕ್ಷೆ ಇದೆ. ಆದರೆ, ಯಾವುದೇ ಕೆಲಸ ಜಾರಿಯಾಗುತ್ತಿಲ್ಲ. ಈಗಾಗಲೇ ಈ ಭಾಗದ ರೈತರು ನೀರಾವರಿ ಸಮಸ್ಯೆಯಿಂದಾಗಿ ಕೃಷಿ ಚಟುವಟಿಕೆಯಲ್ಲಿ ಭಯ ಬೀಳುತ್ತಿದ್ದಾರೆ. ಇದಕ್ಕೆ ಮನೆಯಲ್ಲಿ ಕುಳಿತುಕೊಂಡರೆ ಏನು ಪ್ರಯೋಜನವಿಲ್ಲ. ಹೋರಾಟ ನಡೆಸಿ, ಸರ್ಕಾರದ ಕಣ್ಣು ತೆರೆಸಬೇಕು ಎಂದರು.


ಪ್ರಯೋಗಾಲಯದ ವರದಿ ನೀಡುವೆ
ಈ ಭಾಗಕ್ಕೆ ವ್ಯಾಲಿ ಯೋಜನೆಯ ತ್ಯಾಜ್ಯ ಸಂಸ್ಕರಿಸಿದ ನೀರು ಚೆನ್ನಾಗಿದೆ ಎಂಬುದಾಗಿ ಕೆಲವರು ಹೇಳುತ್ತಿದ್ದಾರೆ. ಆದರೆ, ವಾಸ್ತವಾಂಶ ಬೇರೆ ಇದೆ. ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಪ್ರಯೋಗಾಲಯದ ವರದಿ ಇದ್ದು ಅದನ್ನು ಸಂಬಂಧಪಟ್ಟವರಿಗೆ ಕಳುಹಿಸುತ್ತೇನೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ತಿಳಿಸಿದರು.


ಕೈಗಾರಿಕೆಗೆ ಎಚ್‌ಡಿಕೆ ಪ್ಲ್ಯ್ಲಾನ್
ಈ ಭಾಗದಲ್ಲಿ ಕೈಗಾರಿಕಾಭಿವೃದ್ಧಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ಲ್ಯ್ಲಾನ್ ಮಾಡಿದ್ದಾರೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದು ಅಭಿವೃದ್ಧಿ ಪರ್ವ ಶುರುವಾಗಲಿದೆ. ಜನರ ಹೆಚ್ಚಳ, ನಗರ ಪ್ರದೇಶಗಳ ವ್ಯಾಪ್ತಿ ವಿಸ್ತಾರ ಸಹಜ. ಇದಕ್ಕೆ ಕೃಷಿ ಮತ್ತು ಕೈಗಾರಿಕಾ ಪ್ರಗತಿ ಅಗತ್ಯ. ಈ ಎರಡು ಕಣ್ಣುಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದ ಶಾಸಕ ಮಂಜುನಾಥ್, ಪ್ರತ್ಯೇಕ ಚಿಮುಲ್ ಒಕ್ಕೂಟ ಬೇಗ ರಚನೆಯಾಗಲಿ ಎಂಬ ಕೂಗಿಗೆ ನನ್ನ ಬೆಂಬಲವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net