

ಹಾಸನ: ತಮ್ಮ ವಿರುದ್ಧ ಕೇಳಿಬಂದಿರುವ ಅಪೂರ್ಣ ಆಸ್ತಿ ವಿವರ ಸಲ್ಲಿಕೆ ಆರೋಪ ಪ್ರಕರಣ ಕುರಿತು ಸಂಸದ ಶ್ರೇಯಸ್ ಪಟೇಲ್ ಪ್ರತಿಕ್ರಿಯಿಸಿದ್ದು ಆರೋಪ ಅಲ್ಲಗಳೆದಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಆಗ ನಾನು ಗೆದ್ದೆ ಎಂದು ಪ್ರಚಾರ ಮಾಡಿಕೊಳ್ಳಬಹುದಿತ್ತು. ಈಗ ಸುಪ್ರೀಂಕೋರ್ಟ್‌ಗೆ ಅಪೀಲು ಸಲ್ಲಿಸಿದ್ದಾರೆ ಅಷ್ಟೆ. ಅದನ್ನು ಪ್ರಚಾರಕ್ಕೆ ಬಳಸುವುದು ಸರಿಯಲ್ಲ. ಕೋರ್ಟ್‌ನಲ್ಲಿ ಗೆದ್ದು ಬಂದರೆ ನನ್ನನ್ನು ಕೇಳಲಿ. ಬದಲಿಗೆ ಮಾಧ್ಯಮಗಳ ಎದುರು ಪ್ರಚಾರ ಮಾಡೋದು ಕಾನೂನುಬಾಹಿರ, ಅಸಂವಿಧಾನಿಕ. ನ್ಯಾಯಕ್ಕೆ ಎಲ್ಲರೂ ತಲೆಬಾಗಬೇಕು. ಪ್ರಕರಣದಲ್ಲಿ ಹುರುಳಿಲ್ಲ ಎಂದು ಹೈಕೋರ್ಟ್ ವಜಾ ಮಾಡಿದೆ ಎಂದರು.
ನನಗೆ ಯಾವುದೇ ನೋಟಿಸ್ ಬಂದಿಲ್ಲ. ಕೋರ್ಟ್ ಸಿಬ್ಬಂದಿ ಬಂದು ಕೊಡಬೇಕು. ನಾನು ವಕೀಲರನ್ನು ನಿಯೋಜನೆ ಮಾಡುತ್ತೇನೆ. ಜನರು ಆಶೀರ್ವಾದ ಮಾಡಿದ್ದಾರೆ. ಜಿಲ್ಲೆ ಅಭಿವೃದ್ಧಿ ನನಗೆ ಮುಖ್ಯ. ಮೂರು ದಿನಕ್ಕೊಮ್ಮೆ ಪ್ರೆಸ್ ಮೀಟ್ ಮಾಡೋದು ನನ್ನ ಧ್ಯೇಯವಲ್ಲ. ನಾನು ಕೆಲಸ ಮಾಡುತ್ತಿದ್ದೇನೆ ಎಂದರು.